ಕೆನಡಾ: ಖಾಲಿಸ್ತಾನಿ ಬೆಂಬಲಿಗ, ಘೋಷಿತ ಭಯೋತ್ಪಾದಕನ ಹತ್ಯೆ

ಚಂಡೀಗಢ, ಜೂ. 19: ಕೆನಡಾದಲ್ಲಿ ನೆಲೆಸಿರುವ ಖಾಲಿಸ್ತಾನಿ ನಾಯಕ ಹಾಗೂ ಘೋಷಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಇಬ್ಬರು ಅಜ್ಞಾತ ಬಂದೂಕುಧಾರಿಗಳು ಕೆನಡದ ಬ್ರಿಟಿಶ್ ಕೊಲಂಬಿಯ ರಾಜ್ಯದ ಸರ್ರೆ ನಗರದಲ್ಲಿರುವ ಗುರು ನಾನಕ್ ಸಿಖ್ ಗುರುದ್ವಾರದಲ್ಲಿ ರವಿವಾರ ಗುಂಡು ಹಾರಿಸಿ ಕೊಂದಿದ್ದಾರೆ.
ಸರ್ರೆಯಲ್ಲಿರುವ ಗುರು ನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷನಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಭಾರತ ಸರಕಾರವು ‘‘ತಪ್ಪಿಸಿಕೊಂಡಿರುವ ಭಯೋತ್ಪಾದಕ’’ ಎಂಬುದಾಗಿ ಘೋಷಿಸಿತ್ತು. ಅವನು ವಿವಿಧ ಹಿಂಸಾತ್ಮಕ ಮತ್ತು ಬುಡಮೇಲು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು ಎಂದು ಸರಕಾರ ಹೇಳಿತ್ತು. ಆತನ ಬಂಧನಕ್ಕೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಳೆದ ವರ್ಷದ ಜುಲೈಯಲ್ಲಿ ಘೋಷಿಸಿತ್ತು.
ಖಾಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಎಂಬ ಖಾಲಿಸ್ತಾನಿ ಪರ ಸಂಘಟನೆಯ ಮುಖ್ಯಸ್ಥನಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್, ‘ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಎಂಬ ಸಂಘಟನೆಗೆ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತಂದಿದ್ದನು ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ, ವ್ಯಾಂಕೂವರ್ನಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಕಚೇರಿಯ ಎದುರು ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಅವನು ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದನು ಎಂದು ಮೂಲಗಳು ತಿಳಿಸಿವೆ.







