ಮಣಿಪುರ ಹಿಂಸಾಚಾರ: ಹಿನ್ನೆಲೆಯಲ್ಲಿರುವುದು ಡ್ರಗ್ ಮಾಫಿಯಾವೇ, ದ್ವೇಷ ರಾಜಕಾರಣವೇ?

ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಗಸಗಸೆ ಗಿಡಗಳೇನೋ ಹುಲುಸಾಗಿ ಬೆಳೆಯುತ್ತಿರಬಹುದು. ಆದರೆ ಅಫೀಮು ವ್ಯಾಪಾರದಲ್ಲಿ ಕಣಿವೆ ಪ್ರದೇಶದ ಮೈತೈಗಳು, ನೇಪಾಳಿಗಳು ತೊಡಗಿರುವುದನ್ನು ಮಾತ್ರ, ಕುಕಿಗಳ ವಿರುದ್ಧ ದೊಡ್ಡ ಧ್ವನಿಯಲ್ಲಿ ಆರೋಪಿಸುವವರು ಹೆಚ್ಚು ಪ್ರಸ್ತಾಪಿಸುವುದೇ ಇಲ್ಲ. ಕಣಿವೆಯ ಮಂದಿ ಗುಡ್ಡಗಾಡು ಪ್ರದೇಶಗಳಿಂದ ಖರೀದಿಸಿ ತಂದು ಅಂತರ್‌ರಾಜ್ಯ ಸಾಗಾಟದಲ್ಲಿ ತೊಡಗಿರುವುದಾಗಿ ಪೊಲೀಸರೇ ಹೇಳುತ್ತಿರುವುದನ್ನು ವರದಿಗಳು ಖಚಿತಪಡಿಸುತ್ತವೆ.
ಮಣಿಪುರ ಹಿಂಸಾಚಾರ ತೀವ್ರತೆ ಪಡೆಯುತ್ತಲೇ ಇದೆ. ನೋಡನೋಡುತ್ತ ಇದು ಹಲವು ಸುಳಿಗಳೊಡನೆ ತಳಕು ಹಾಕಿಕೊಳ್ಳುತ್ತಿದೆಯೆ ಎಂಬ ಪ್ರಶ್ನೆಯೂ ಎದ್ದಿದೆ.
ಮಣಿಪುರದ ಕುಕಿ ಬುಡಕಟ್ಟು ಸಮುದಾಯವನ್ನು ಹಣಿಯುವುದು ಅಲ್ಲಿನ ಬಿಜೆಪಿ ಸರಕಾರದ ಮಸಲತ್ತು ಎಂಬ ಆರೋಪಗಳು ಈಗಾಗಲೇ ಕೇಳಿಬಂದಿವೆ. ಬಹುಪಾಲು ಕ್ರಿಶ್ಚಿಯನ್ ಸಮುದಾಯದವರಾದ ಕುಕಿ ಜನಾಂಗದ ವಿರುದ್ಧ ಮೈತೈ ಸಮುದಾಯವನ್ನು ಎತ್ತಿಕಟ್ಟಲಾಗಿರುವ ರಾಜಕೀಯ ಇದೆಂಬುದು ವ್ಯಾಪಕವಾಗಿರುವ ವಾದ.
ಮಣಿಪುರದ ಶೇ. ೯೦ರಷ್ಟು ಪ್ರದೇಶ ಗುಡ್ಡಗಾಡಾಗಿದ್ದು, ಅದು ಕುಕಿ ಸಮುದಾಯವೂ ಸೇರಿದಂತೆ ಬುಡಕಟ್ಟಿನವರ ನೆಲೆ. ಇನ್ನುಳಿದ ಶೇ. ೧೦ರಷ್ಟಿರುವ ಕಣಿವೆ ಪ್ರದೇಶದಲ್ಲಿ ಇಲ್ಲಿನ ಬಹುಸಂಖ್ಯಾತ ಮೈತೈ ಸಮುದಾಯ ನೆಲೆಸಿದೆ. ಅವರಿಗೆ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಹೊಂದುವ ಹಕ್ಕು ಈಗಿನ ಕಾನೂನಿನ ಪ್ರಕಾರ ಇಲ್ಲ. ಆದರೆ ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂಬ ಅವರ ಒತ್ತಾಯ ಕೈಗೂಡಿದರೆ ಆ ಅವಕಾಶ ಅವರದಾಗುತ್ತದೆ. ಆದರೆ ಮೈತೈ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕುಕಿ ಸಮುದಾಯದ ಬಲವಾದ ವಿರೋಧವಿದೆ. ಯಾವಾಗ ಮೈತೈ ಸಮುದಾಯದ ಬೇಡಿಕೆಗೆ ಹೈಕೋರ್ಟ್ ಕೂಡ ಒಪ್ಪಿತೋ ಅಲ್ಲಿಂದ ಕುಕಿ ಸಮುದಾಯದವರ ವಿರೋಧ ತೀವ್ರ ಸ್ವರೂಪ ಪಡೆಯಿತು. ಅದಾದ ಬಳಿಕ ಶುರುವಾದದ್ದೇ ಈ ಹಿಂಸಾಚಾರ.
ಆದರೆ ಕುಕಿ ಸಮುದಾಯದ ಐಕ್ಯತಾ ಮೆರವಣಿಗೆ ಶಾಂತಿಯುತವಾಗಿಯೇ ಸಾಗಿದ್ದಾಗ ದುಷ್ಕರ್ಮಿಗಳಿಂದಾಗಿ ಹಿಂಸಾಚಾರ ಸಂಭವಿಸಿ, ಅದು ಇವತ್ತಿನ ಘೋರ ರೂಪ ಪಡೆದಿದೆ ಎಂದು ಕುಕಿ ಸಮುದಾಯದ ಪರವಾಗಿರುವ ಧ್ವನಿಗಳು ಹೇಳುತ್ತಿವೆ. ಕುಕಿ ಸಮುದಾಯದವರ ವಿರುದ್ಧದ ಮೈತೈ ಸಂಘಟನೆಗಳಿಗೆ ಸರಕಾರದ್ದೇ ಬೆಂಬಲ ಮತ್ತು ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತದೆ.
ಇದುವರೆಗಿನ ಹಿಂಸಾಚಾರದಲ್ಲಿ ಕುಕಿ ಮತ್ತು ಮೈತೈ ಸಮುದಾಯಗಳೆರಡರ ನಾಯಕರ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಎರಡೂ ಸಮುದಾಯಗಳ ಅದೆಷ್ಟೋ ಅಮಾಯಕರ ಬದುಕು ದಿಕ್ಕೆಟ್ಟು ಹೋಗಿದೆ. ಇಷ್ಟೆಲ್ಲ ಆಗುತ್ತಿದ್ದರೂ ಒಂದೇ ಒಂದು ಸಲ ಪ್ರತಿಕ್ರಿಯೆ ನೀಡದ, ಶಾಂತಿ ಕಾಪಾಡುವಂತೆ ಕೇಳಿಕೊಳ್ಳದ ಪ್ರಧಾನಿ ಮೋದಿ ನಡೆ ಕೂಡ ವ್ಯಾಪಕ ಟೀಕೆಗೊಳಗಾಗಿದೆ.
ಇವೆಲ್ಲದರ ನಡುವೆಯೇ ಇಡೀ ಹಿಂಸಾಚಾರವನ್ನು ಮಾದಕ ದ್ರವ್ಯ ವ್ಯಾಪಾರದೊಂದಿಗೆ ಜೋಡಿಸಲಾಗುತ್ತಿರುವುದು ಮತ್ತು ಅಲ್ಲಿಯೂ ಕುಕಿ ಸಮುದಾಯದತ್ತಲೇ ಬೆರಳು ಮಾಡುತ್ತಿರುವುದು ಮತ್ತೊಂದು ಬೆಳವಣಿಗೆ.
ಕುಕಿಗಳೇ ಇವತ್ತಿನ ಸ್ಥಿತಿಗೆ ಕಾರಣ. ಅವರು ಗುಡ್ಡ ಪ್ರದೇಶದಲ್ಲಿ ಕಾಡು ಕಡಿದು ಗಸಗಸೆ ಬೆಳೆಯುತ್ತಿದ್ದಾರೆ. ಸರಕಾರ ಅದರ ವಿರುದ್ಧ ಕ್ರಮ ತೆಗೆದುಕೊಂಡಿದ್ದಕ್ಕೆ ಮಣಿಪುರದಲ್ಲಿ ಅವರೀಗ ಇಂಥ ನರಕ ಸೃಷ್ಟಿಸಿದ್ದಾರೆ ಎಂಬುದು ಜನರ ಆರೋಪ. ಸ್ಕ್ರಾಲ್ ವೆಬ್ ಪತ್ರಿಕೆಯ ವರದಿಯೊಂದರ ಪ್ರಕಾರ, ಮೈತೈ ಪ್ರಾಬಲ್ಯದ ಇಂಫಾಲದಲ್ಲಿ ಎದುರಾಗುವ ಪ್ರತೀ ಎರಡನೆಯ ವ್ಯಕ್ತಿ ಇದೇ ಆರೋಪ ಮಾಡುತ್ತಾನೆ.
ಮೈತೈ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಆರು ಗುಂಪುಗಳ ಒಕ್ಕೂಟವಾದ ಮಣಿಪುರ ಸಮಗ್ರತಾ ಸಮನ್ವಯ ಸಮಿತಿ ಕೂಡ ಇದು ಪಕ್ಕಾ ನಾರ್ಕೋ-ಭಯೋತ್ಪಾದನೆಯ ಪ್ರಕರಣ ಎಂದೇ ಹೇಳುತ್ತಿದೆ. ಮೈತೈ ಸಮುದಾಯದ ಶಿಕ್ಷಣ ತಜ್ಞರು, ನಾಗರಿಕ ಸಮಾಜದ ಗುಂಪುಗಳು ಮತ್ತು ಭದ್ರತೆ ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಮೈತೈ ಸಮುದಾಯದ ಅಧಿಕಾರಿಗಳೂ ಇದೇ ಆರೋಪ ಮಾಡುತ್ತಾರೆ.
ಮಾದಕ ದ್ರವ್ಯ ವ್ಯವಹಾರ ವಿರುದ್ಧದ ಸರಕಾರದ ಕ್ರಮಕ್ಕೆ ಪ್ರತಿಯಾಗಿ ಕುಕಿ ಗುಂಪುಗಳು ಮತ್ತು ಕುಕಿ ಬಂಡುಕೋರರ ದೀರ್ಘಾವಧಿಯ ಪಿತೂರಿಯ ಭಾಗವೇ ಈ ಹಿಂಸಾಚಾರ ಎಂದು ಅವರೆಲ್ಲ ಭಾವಿಸುತ್ತಾರೆ. ಮಣಿಪುರ ಸರಕಾರ ಮಾದಕ ದ್ರವ್ಯಗಳ ದಮನ, ಅದರಲ್ಲೂ ರಾಜ್ಯದಲ್ಲಿನ ಗಸಗಸೆ ಕೃಷಿ ವಿರುದ್ಧ ಕಾರ್ಯಾಚರಣೆಗಿಳಿದ ಬಳಿಕ ಈ ಪಿತೂರಿ ಪರಾಕಾಷ್ಠೆ ಮುಟ್ಟಿದೆ ಎಂದು ಅವರು ವಾದಿಸುತ್ತಾರೆ.
೨೦೧೭ರಿಂದ, ರಾಜ್ಯ ಸರಕಾರ ಸುಮಾರು ೧೫,೫೦೦ ಎಕರೆ ಗಸಗಸೆ ಹೊಲಗಳನ್ನು ನಾಶಪಡಿಸಿದೆ ಮತ್ತು ಇವುಗಳಲ್ಲಿ ಶೇ. ೮೫ರಷ್ಟು ಪ್ರದೇಶಗಳು ಕುಕಿ ಪ್ರಾಬಲ್ಯದ ಜಿಲ್ಲೆಗಳಲ್ಲಿಯೇ ಇವೆ. ಕುಕಿ ಬಂಡುಕೋರರ ಗುಂಪುಗಳು ಮಾದಕ ದ್ರವ್ಯ ವ್ಯವಹಾರದ ಹಣವನ್ನೇ ಅವಲಂಬಿಸಿವೆ ಎಂಬುದು ಅವರ ಆರೋಪ.
ಹಾಗಾಗಿಯೇ ಅವರು ಸರಕಾರದ ವಿರುದ್ಧ ಮುಗಿಬೀಳಲು ಕಾಯುತ್ತಿದ್ದರು. ಅದೇ ವೇಳೆಗೆ, ಮೈತೈ ಸಮುದಾಯಕ್ಕೆ ಎಸ್ಟಿ ಸವಲತ್ತು ನೀಡುವ ವಿಚಾರದ ಹೈಕೋರ್ಟ್ ಆದೇಶ ಹೊರಬಿದ್ದುದು ನೆಪವಾಗಿ ಸಿಕ್ಕಿತು ಎಂದು ಕುಕಿ ಸಮುದಾಯದ ವಿರುದ್ಧವಿರುವವರು ಆರೋಪಿಸುತ್ತಾರೆ.
ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಕುರಿತು ಪರಿಗಣಿಸುವಂತೆ ಮಣಿಪುರ ಹೈಕೋರ್ಟ್ ಎಪ್ರಿಲ್ ೧೯ರಂದು ರಾಜ್ಯ ಸರಕಾರಕ್ಕೆ ಆದೇಶವನ್ನು ಅವರು ಉಲ್ಲೇಖಿಸುತ್ತಾರೆ. ಅದನ್ನು ವಿರೋಧಿಸಿ ಕುಕಿಗಳು ಸೇರಿದಂತೆ ಬುಡಕಟ್ಟು ಗುಂಪುಗಳು ಬೃಹತ್ ಪ್ರತಿಭಟನೆ ನಡೆಸಿದವು. ಅದೇ ವೇಳೆಯೇ ಹಿಂಸಾಚಾರ ಸಂಭವಿಸಿತು.
ಈ ಹಿಂಸಾಚಾರಕ್ಕೂ ಮೊದಲು ತಿಂಗಳುಗಟ್ಟಲೆ ಕುಕಿಗಳು ಮತ್ತು ರಾಜ್ಯ ಸರಕಾರದ ನಡುವಿನ ಉದ್ವಿಗ್ನತೆ ಕುದಿಯುತ್ತಲೇ ಇತ್ತು. ಕುಕಿಗಳ ಗಸಗಸೆ ಬೆಳೆಯನ್ನು ನಾಶಗೊಳಿಸಿದ ಸರಕಾರದ ಕ್ರಮವನ್ನು ಆಯ್ದು ಗುರಿಪಡಿಸುವ ಸರಕಾರದ ನಡೆಯಾಗಿದೆ ಎಂದು ಕುಕಿಗಳು ಭಾವಿಸುತ್ತಾರೆ. ಗಸಗಸೆ ಬೆಳೆಯುತ್ತಿರುವ ತಪ್ಪಿತಸ್ಥ ಗ್ರಾಮಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರ ಬೆದರಿಕೆ ಒಡ್ಡಿದಾಗ ಅದನ್ನು ದಮನಕಾರಿ ನೀತಿಯೆಂದು ಆಕ್ಷೇಪಿಸಲಾಯಿತು. ಆಗಲೇ ಸರಕಾರದ ಕ್ರಮ ವಿವಾದಾಸ್ಪದವಾಯಿತು. ಈಗಾಗಲೇ ಸರಕಾರದ ವಿರುದ್ಧ ಅಪನಂಬಿಕೆ ಹೆಚ್ಚುತ್ತಿರುವ ಕಾರಣ, ಕುಕಿ ಸಮುದಾಯ ಇದನ್ನು ತಮ್ಮ ಪೂರ್ವಜರ ಭೂಮಿಯನ್ನು ತಮ್ಮಿಂದ ಕಸಿಯುವ ಸರಕಾರದ ತಂತ್ರವೆಂದು ನೋಡುತ್ತಿವೆ.
ಇದಲ್ಲದೆ ಮುಖ್ಯಮಂತ್ರಿ ಬಿರೇನ್ ಸಿಂಗ್, ಗಸಗಸೆ ಕೃಷಿಯನ್ನು ಅಕ್ರಮ ವಲಸೆ, ಅರಣ್ಯ ಭೂಮಿ ಮೇಲಿನ ಅತಿಕ್ರಮಣದಂಥ ರಾಜ್ಯದ ಇತರ ಸಮಸ್ಯೆಗಳೊಂದಿಗೆ ಜೋಡಿಸಿರುವುದು ಇಡೀ ಸಮಸ್ಯೆಯನ್ನು ಇನ್ನಷ್ಟು ಗೊಂದಲಮಯವಾಗಿಸಿದೆ. ಮಾರ್ಚ್ ನಲ್ಲಿ ಸಂದರ್ಶನವೊಂದರಲ್ಲಿ ಅವರು, ಕುಕಿಗಳು ಮೀಸಲು ಅರಣ್ಯ, ಸಂರಕ್ಷಿತ ಅರಣ್ಯಗಳನ್ನೆಲ್ಲ ಅತಿಕ್ರಮಿಸಿ, ಗಸಗಸೆ ಕೃಷಿ ಮತ್ತು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಮಣಿಪುರದಲ್ಲಿ ಮಾದಕ ದ್ರವ್ಯ ಸಮಸ್ಯೆ ಇರುವುದು ನಿಜವೆಂಬುದನ್ನು ಎಲ್ಲಾ ಸಮುದಾಯ ಗಳ ಜನರು ಒಪ್ಪುತ್ತಾರೆ. ಥಾಯ್ಲೆಂಡ್, ಲಾವೋಸ್ ಮತ್ತು ಕಾಂಬೋಡಿಯಾಗಳ ಟ್ರೈ ಜಂಕ್ಷನ್‌ನಲ್ಲಿರುವ ಗೋಲ್ಡನ್ ಟ್ರಯಾಂಗಲ್ ಎಂಬ ಕುಖ್ಯಾತ ಪ್ರದೇಶವೇ ಸಾಂಪ್ರದಾಯಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾದಕ ದ್ರವ್ಯ ಉದ್ಯಮಕ್ಕೆ ನೆಲೆಯಾಗಿದೆ. ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಮಣಿಪುರ ಹೆರಾಯಿನ್ ಕಾರಣದಿಂದ ಬಹುದೊಡ್ಡ ಆಪತ್ತಿನಲ್ಲಿ ಸಿಲುಕಿಕೊಂಡಿತ್ತು.
ಕಳೆದ ಎರಡು ದಶಕಗಳಲ್ಲಿ ಮಣಿಪುರದ ಮಾದಕದ್ರವ್ಯ ಸಮಸ್ಯೆಗಳಿಗೆ ಹೊಸ ಆಯಾಮವೊಂದು ಸೇರಿಕೊಂಡಿದೆ. ಅದೇ, ಮ್ಯಾನ್ಮಾರ್ ಗಡಿಯಲ್ಲಿರುವ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಗಸಗಸೆ ಕೃಷಿ ವ್ಯಾಪಿಸಿಕೊಳ್ಳುತ್ತಿರುವುದು.
ಮೊದಲು ಇಲ್ಲಿ ಗಸಗಸೆ ಮತ್ತು ಅಫೀಮುಗಳು ಅಷ್ಟಾಗಿ ಇರಲಿಲ್ಲ. ಆದರೆ ಈಗ ಅವು ಎಲ್ಲೆಡೆ ಆವರಿಸಿವೆ ಎಂದು ಇಂಫಾಲ ಮೂಲದ ರಾಜಕೀಯ ಅರ್ಥಶಾಸ್ತ್ರಜ್ಞ ಹೋಮೆನ್ ತಂಗ್ಜಮ್ ಹೇಳುತ್ತಾರೆ. ಅವರು ಇಂಡೋ-ಮ್ಯಾನ್ಮಾರ್ ಮಾದಕವಸ್ತುಗಳ ವ್ಯಾಪಾರದಲ್ಲಿ ಕ್ಷೇತ್ರ ಆಧಾರಿತ ಸಂಶೋಧನೆಯನ್ನು ನಡೆಸಿದವರು.
ಕಳೆದ ಎರಡು ದಶಕಗಳಲ್ಲಿ ಹೆರಾಯಿನ್ ವ್ಯಾಪಾರದ ದೊಡ್ಡ ಭಾಗವನ್ನು ಗೋಲ್ಡನ್ ಟ್ರಯಾಂಗಲ್‌ನಿಂದ ಮ್ಯಾನ್ಮಾರ್‌ಗೆ ವರ್ಗಾಯಿಸಿರುವುದು ಇದಕ್ಕೆ ಕಾರಣ ಎಂಬುದು ತಂಗ್ಜಮ್ ಅಭಿಪ್ರಾಯ. ಥಾಯ್ಲೆಂಡ್ ಮತ್ತು ಲಾವೋಸ್ ಮಾದಕ ದ್ರವ್ಯ ಆರ್ಥಿಕತೆಯಿಂದ ದೂರ ಸರಿಯಲು ಮುಂದಾದರೂ, ಮ್ಯಾನ್ಮಾರ್ ಸರಕಾರ ಮತ್ತು ಅದರ ಸೇನೆ ದೇಶದ ವಿವಿಧ ಸಶಸ್ತ್ರ ಜನಾಂಗೀಯ ಸೇನಾಪಡೆಗಳಿಗೆ ಶಾಂತಿಯ ವಿಚಾರವನ್ನು ಮುಂದಿಟ್ಟುಕೊಂಡು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಮ್ಯಾನ್ಮಾರ್‌ನ ಹಲವು ಸಶಸ್ತ್ರ ಗುಂಪುಗಳು ಜನಾಂಗೀಯ ಸಂಬಂಧಗಳ ಕಾರಣದಿಂದಾಗಿ ಭಾರತದ ಗಡಿಯಾಚೆಗಿನ ಉಗ್ರಗಾಮಿ ಗುಂಪುಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ.
೧೯೯೦ರ ದಶಕದಿಂದ ಜುಂಟಾ (ಮ್ಯಾನ್ಮಾರ್ ಸೇನೆ) ತನ್ನ ದೇಶದಲ್ಲಿನ ಜನಾಂಗೀಯ ದಂಗೆಗಳಿಗೆ ಸಂಬಂಧಿಸಿದಂತೆ ತನ್ನ ನೀತಿಯನ್ನು ಬದಲಾಯಿಸಿತು. ಈ ಪ್ರಕ್ರಿಯೆಯಲ್ಲಿ ಮಾದಕ ದ್ರವ್ಯಗಳ ವಿಚಾರದಲ್ಲಿ ಹೆಚ್ಚು ರಾಜಿಯಾಗುವಂತಾಯಿತು. ಇಂಡೋ-ಮ್ಯಾನ್ಮಾರ್ ಪ್ರದೇಶದಲ್ಲಿ ಮಾದಕವಸ್ತುಗಳ ವ್ಯಾಪಾರದ ಕುರಿತ ಇತ್ತೀಚಿನ ‘ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರೀಸರ್ಚ್‌ನ ಫೀಲ್ಡ್ ಇನ್ವೆಸ್ಟಿಗೇಟರ್ ಆಗಿದ್ದ ಹೋಮೆನ್ ತಂಗ್ಜಮ್ ಪ್ರಕಾರ, ೨೦೧೦ರ ದಶಕದಿಂದ ಅದು ಮಾದಕ ದ್ರವ್ಯ ಉದ್ಯಮಕ್ಕೆ ಇನ್ನಷ್ಟು ಒತ್ತುಕೊಡತೊಡಗಿತು. ಇದು ಮಣಿಪುರದ ಬೆಟ್ಟಗಳಲ್ಲಿ ಗಸಗಸೆ ಕೃಷಿ ತೀವ್ರವಾಗಿ ಆವರಿಸಿಕೊಳ್ಳಲು ಕಾರಣವಾಗಿದೆ.
ಸ್ಥಳೀಯ ಪರಿಸ್ಥಿತಿಗಳು ಸಹ ಇದು ವ್ಯಾಪಕಗೊಳ್ಳಲು ಕಾರಣವಾಗುತ್ತಿವೆ ಎನ್ನುತ್ತಾರೆ ತಂಗ್ಜಮ್. ಈಶಾನ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಅನೇಕ ಬುಡಕಟ್ಟು ಸಮುದಾಯಗಳು ರೂಢಿ ಮಾಡಿಕೊಂಡಿರುವ ಸ್ಥಳಾಂತರದ ಕೃಷಿ ವಿಧಾನವನ್ನು ಅವರು ಉಲ್ಲೇಖಿಸುತ್ತಾರೆ. ಆ ಹಿನ್ನೆಲೆಯಲ್ಲಿ, ಮಣಿಪುರದ ಬೆಟ್ಟಗಳಲ್ಲಿ ಅದರ ಹವಾಮಾನ ಮತ್ತದು ಮ್ಯಾನ್ಮಾರ್‌ಗೆ ಸಮೀಪವಿರುವ ಕಾರಣದಿಂದ ಹೆಚ್ಚು ಲಾಭದಾಯಕ ಗಸಗಸೆ ಬೆಳೆಯಲು ಫಲವತ್ತಾದ ನೆಲವಾಯಿತು. ತಂಗ್ಜಮ್ ಮತ್ತವರ ತಂಡ ಗಸಗಸೆ ಕೃಷಿಯಲ್ಲಿ ತೊಡಗಿರುವ ಜನರನ್ನು ಮಾತನಾಡಿಸಿ ಕಂಡುಕೊಂಡಿರುವ ವಿಚಾರಗಳ ಪ್ರಕಾರ, ಅದು ಹೂಡಿಕೆಯ ಐದು ಪಟ್ಟು ಹೆಚ್ಚು ಹಣವನ್ನು ತರುವ ಕೃಷಿಯಾಗಿದೆ.
ಮ್ಯಾನ್ಮಾರ್‌ನ ಚಿನ್ ರಾಜ್ಯದ ಗಡಿಯಲ್ಲಿರುವ ಮಣಿಪುರದ ದಕ್ಷಿಣ ಬೆಟ್ಟಗಳಲ್ಲಿ ಗಸಗಸೆ ಕೃಷಿ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಉಪಗ್ರಹ ಚಿತ್ರ ಉಲ್ಲೇಖಿಸಿ ಪೊಲೀಸರು ಹೇಳುವುದು ವರದಿಯಾಗಿದೆ. ಅಲ್ಲೆಲ್ಲ ಮೊದಲು ಅನಾನಸ್ ಬೆಳೆಯಲಾಗುತ್ತಿತ್ತು. ಈಗ ಗಸಗಸೆ ವ್ಯಾಪಿಸಿದೆ ಎನ್ನಲಾಗುತ್ತದೆ. ಜನವರಿಯಲ್ಲಿ, ಯುನೈಟೆಡ್ ನೇಷನ್ಸ್ ಆಫ್ ಡ್ರಗ್ಸ್ ಆ್ಯಂಡ್ ಕ್ರೈಮ್ ಮ್ಯಾನ್ಮಾರ್‌ನ ಅಫೀಮು ವ್ಯಾಪಾರದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ.
ಇವೆಲ್ಲವೂ ಒಂದು ಕಡೆಯಾದರೆ, ಗಮನಿಸಬೇಕಾದ ಮತ್ತೂ ಒಂದು ವಿಚಾರ ಇಲ್ಲಿದೆ. ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಗಸಗಸೆ ಗಿಡಗಳೇನೋ ಹುಲುಸಾಗಿ ಬೆಳೆಯುತ್ತಿರಬಹುದು. ಆದರೆ ಅಫೀಮು ವ್ಯಾಪಾರದಲ್ಲಿ ಕಣಿವೆ ಪ್ರದೇಶದ ಮೈತೈಗಳು, ನೇಪಾಳಿಗಳು ತೊಡಗಿರುವುದನ್ನು ಮಾತ್ರ, ಕುಕಿಗಳ ವಿರುದ್ಧ ದೊಡ್ಡ ಧ್ವನಿಯಲ್ಲಿ ಆರೋಪಿಸುವವರು ಹೆಚ್ಚು ಪ್ರಸ್ತಾಪಿಸುವುದೇ ಇಲ್ಲ. ಕಣಿವೆಯ ಮಂದಿ ಗುಡ್ಡಗಾಡು ಪ್ರದೇಶಗಳಿಂದ ಖರೀದಿಸಿ ತಂದು ಅಂತರ್‌ರಾಜ್ಯ ಸಾಗಾಟದಲ್ಲಿ ತೊಡಗಿರುವುದಾಗಿ ಪೊಲೀಸರೇ ಹೇಳುತ್ತಿರುವುದನ್ನು ವರದಿಗಳು ಖಚಿತಪಡಿಸುತ್ತವೆ.
ಮಣಿಪುರದಿಂದ ಅಫೀಮನ್ನು ಸಾಮಾನ್ಯವಾಗಿ ನೆರೆಯ ಅಸ್ಸಾಮಿನ ಗುವಾಹಟಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ದಲ್ಲಾಳಿಗಳು ಅದನ್ನು ಭಾರತದಾದ್ಯಂತ ಕಳ್ಳಸಾಗಣೆ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಮಣಿಪುರ ಪೊಲೀಸರು ಒದಗಿಸುವ ಮಾಹಿತಿಯಂತೆ, ೨೦೧೭ರಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಅವರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕಣಿವೆ ಮೂಲದ ಪಂಗಲ್ ಗುಂಪಿನವರು. ಆನಂತರದ ಸ್ಥಾನದಲ್ಲಿ ಕುಕಿಗಳು ಮತ್ತು ಮೈತೈ ಸಮುದಾಯದವರಿದ್ದಾರೆ. ಆದರೆ, ಕಣಿವೆಯಲ್ಲಿ ಮಾತ್ರ ಗಸಗಸೆ ಕೃಷಿ ವಿಚಾರವಾಗಿ ಕುಕಿ ಸಮುದಾಯವನ್ನೇ ದೂಷಿಸಲಾಗುತ್ತದೆ.
ಸಮುದಾಯದಲ್ಲಿನ ವಿಶಿಷ್ಟ ಭೂ ಹಿಡುವಳಿ ವ್ಯವಸ್ಥೆ ಹಳ್ಳಿಯ ಮುಖ್ಯಸ್ಥರಿಗೆ ಸಂಪೂರ್ಣವಾಗಿ ಮಾಲಕತ್ವವನ್ನು ವಹಿಸಿಕೊಟ್ಟಿದ್ದು, ಕುಕಿ ಹಳ್ಳಿಗಳಲ್ಲಿ ಗಸಗಸೆ ಕೃಷಿ ಸುಲಭವಾಗುವುದಕ್ಕೆ ಅದು ಮುಖ್ಯ ಕಾರಣ ಎಂದು ತಂಗ್ಜಮ್ ಗುರುತಿಸುತ್ತಾರೆ. ನಾಗಾ ಪ್ರದೇಶಗಳಲ್ಲಿ ಇದು ಹೆಚ್ಚು ಜನರ ತೀರ್ಮಾನಕ್ಕೆ ಸಂಬಂಧಪಡುವುದರಿಂದ ಹೆಚ್ಚು ಸಂಕೀ ರ್ಣವಾಗಿದೆ. ಹಾಗಾಗಿಯೇ, ಮಣಿಪುರದಲ್ಲಿ ಮೊದಲ ಗಸಗಸೆ ಕೃಷಿ ೧೯೮೦ರ ದಶಕದಲ್ಲಿ ನಾಗಾ ಪ್ರದೇಶದಲ್ಲಿಯೇ ಶುರುವಾದರೂ ಈಗ ಅಲ್ಲಿ ಗಸಗಸೆ ಕೃಷಿ ಪ್ರಮಾಣ ಕಡಿಮೆಯೇ ಇದೆ ಎನ್ನುತ್ತಾರೆ ತಂಗ್ಜಮ್.
ಆದರೆ ಕುಕಿ ಸಮುದಾಯದ ವಾದವೇನೆಂದರೆ, ಮಣಿಪುರದ ಗಸಗಸೆ ಕೃಷಿಯನ್ನು ಒಂದು ಸಮುದಾಯದೊಂದಿಗೆ ಮಾತ್ರವೇ ಜೋಡಿಸಿ ಮಾತನಾಡುವುದು ಅನ್ಯಾಯ ಎಂಬುದು. ಮಣಿಪುರದಾದ್ಯಂತ ಗಸಗಸೆ ಕೃಷಿ ವ್ಯಾಪಕವಾಗಿದೆ ಮತ್ತು ಮೈತೈಗಳು, ನಾಗಾಗಳು ಸೇರಿದಂತೆ ಎಲ್ಲಾ ಸಮುದಾಯದವರೂ ಅದರ ಕೃಷಿಕರಾಗಿ ಸಮಾನ ತಪ್ಪಿತಸ್ಥರೇ ಆಗಿದ್ದಾರೆ ಎಂಬುದು ಕುಕಿಗಳ ವಾದ.
ನೆದರ್‌ಲ್ಯಾಂಡ್ಸ್ ಮೂಲದ ಟ್ರಾನ್ಸ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ನ ವರದಿ ಡಿಸೆಂಬರ್ ೨೦೨೧ರಲ್ಲಿ ಬಿಡುಗಡೆಯಾಯಿತು. ಮಣಿಪುರದಲ್ಲಿ ಗಸಗಸೆ ತೋಟಗಳು ಸೈಕುಲ್, ಉಖ್ರುಲ್ ಮತ್ತು ಚಾಂಡೆಲ್‌ಗಳಲ್ಲಿ ಅತ್ಯಧಿಕ ಎಂದು ಅದು ಹೇಳಿದೆ. ಸೈಕುಲ್ ಮುಖ್ಯವಾಗಿ ಕುಕಿಗಳ ನೆಲೆಯಾಗಿದ್ದರೆ, ಉಖ್ರುಲ್ ಮತ್ತು ಚಾಂಡೆಲ್ ನಾಗಾ ಪ್ರಾಬಲ್ಯದ ಜಿಲ್ಲೆಗಳಾಗಿವೆ. ಇನ್ನು ಕುಕಿ ಪ್ರಾಬಲ್ಯದ ಚುರಾಚಾಂದ್‌ಪುರದ ಬೆಟ್ಟಗಳಲ್ಲಿ ಸಮಸ್ಯೆ ಇರುವುದನ್ನು ಸಮುದಾಯ ಮತ್ತು ಚರ್ಚ್ ಮುಖಂಡರು ಒಪ್ಪುತ್ತಾರೆ ಎನ್ನುತ್ತವೆ ವರದಿಗಳು.
ಸಮುದಾಯದ ಅತ್ಯುನ್ನತ ಸಂಸ್ಥೆಯಾದ ‘ಕುಕಿ ಇಂಪಿ’ಯ ಮೇಲ್ವಿಚಾರಣಾ ಕೋಶದ ಅಧ್ಯಕ್ಷ ಸೌಮೆಂಥಾಂಗ್ ಡೌಂಗೆಲ್ ಹೇಳುವ ಪ್ರಕಾರ, ಗಸಗಸೆ ಬೆಳೆಯದಂತೆ ಜನರನ್ನು ಸಕ್ರಿಯವಾಗಿ ತಡೆಯಲಾಗುತ್ತಿದೆ. ಆದರೆ ಬಡತನದ ಕಾರಣ ಅನೇಕರು ಅದನ್ನು ಮುಂದುವರಿಸಿದ್ದಾರೆ. ಸರಕಾರ ಅವರಿಗೆ ಸಹಾಯ ಮಾಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ.
ಚರ್ಚ್‌ಗಳು ಕೂಡ ಗಸಗಸೆ ಕೃಷಿಯನ್ನು ವಿರೋಧಿಸಿವೆ ಎನ್ನುತ್ತವೆ ವರದಿಗಳು. ಆದರೆ ಚರ್ಚ್‌ಗಳು ಎತ್ತುತ್ತಿರುವ ಪ್ರಶ್ನೆ ಏನೆಂದರೆ, ಸರಕಾರ ಮಾದಕ ದ್ರವ್ಯದ ಬಗ್ಗೆ ಮಾತ್ರವೇ ಏಕೆ ಅಷ್ಟೊಂದು ಗಮನ ಹರಿಸಿದೆ, ಮದ್ಯದ ವಿಚಾರವಾಗಿ ಏಕೆ ಸೌಮ್ಯವಾಗಿದೆ ಎಂಬುದು. ಬಿರೇನ್ ಸಿಂಗ್ ಸರಕಾರ ಡ್ರಗ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಆದರೆ ಮತ್ತೊಂದೆಡೆ ಮೈತೈ ಸಮುದಾಯ ತೊಡಗಿಸಿಕೊಂಡಿರುವ ವೈನ್ ವ್ಯವಹಾರವನ್ನು ಕಾನೂನುಬದ್ಧಗೊಳಿಸುತ್ತಿದೆ ಎಂಬುದು ಅವರ ತಕರಾರು. ೨೦೨೨ರಲ್ಲಿ ಮಣಿಪುರ ಸರಕಾರ ನಿಷೇಧ ತೆಗೆದುಹಾಕಲು ತನ್ನ ಮದ್ಯ ನೀತಿಯನ್ನು ಪರಿಷ್ಕರಿಸಿತು.
ಮಣಿಪುರ ಸರಕಾರದ ಇನ್ನೊಂದು ಆರೋಪವೆಂದರೆ, ಕುಕಿ ಬಂಡುಕೋರ ಗುಂಪುಗಳು ಮ್ಯಾನ್ಮಾರ್‌ನ ಅಕ್ರಮ ಕುಕಿ ವಲಸಿಗರಿಗೆ ಆಶ್ರಯ ನೀಡುತ್ತಿದ್ದು, ಅವರು ಗಸಗಸೆ ಕೃಷಿ ಮತ್ತು ಅಫೀಮು ತಯಾರಿಕೆಯಲ್ಲಿ ಸ್ಥಳೀಯರಿಗೆ ನೆರವಾಗುತ್ತಾರೆ ಎಂಬುದು. ಮ್ಯಾನ್ಮಾರ್‌ನ ಜನರು ಈಗಾಗಲೇ ಮಣಿಪುರದಲ್ಲಿ ಮಾದಕ ದ್ರವ್ಯ ವ್ಯವಹಾರದ ಭಾಗವಾಗಿದ್ದು, ಸ್ಥಳೀಯರು ಅವರಿಂದಲೇ ಗಸಗಸೆಯಿಂದ ಒಪಿಯಾಡ್ ಹೊರತೆಗೆಯುವ ಕುಶಲತೆಯನ್ನು ಕಲಿತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳೂ ಹೇಳುತ್ತಾರೆ.
ಗಡಿಯಾಚೆಗಿನ ಕುಕಿ ಸಶಸ್ತ್ರ ಸೇನಾಪಡೆಗಳು ಡ್ರಗ್ಸ್ ವ್ಯವಹಾರದ ಹಣವನ್ನೇ ಅವಲಂಬಿಸಿವೆ ಎಂದು ಮೈತೈ ಗುಂಪುಗಳು ಆರೋಪಿಸುತ್ತಿವೆ. ಈಗ ಮಾದಕ ದ್ರವ್ಯ ವಿರೋಧಿ ಕ್ರಮದಿಂದ ಅಸಮಾಧಾನ ಎದ್ದಿದ್ದು, ಇವೆಲ್ಲವೂ ಹಿಂಸಾಚಾರ ತೀವ್ರ ಸ್ವರೂಪ ಪಡೆಯಲು ಕಾರಣ ಎಂಬುದು ಅವರ ವಾದ.
ಆದರೆ ಈ ಆರೋಪವನ್ನು ಕುಕಿ ಗುಂಪುಗಳು ನಿರಾಕರಿಸುತ್ತವೆ. ಹಲವಾರು ಕುಕಿ ಬಂಡುಕೋರ ಗುಂಪುಗಳು ಗಸಗಸೆ ಕೃಷಿ ವಿರುದ್ಧ ಕೇಂದ್ರ ಸರಕಾರದ ನಿಲುವಿನೊಂದಿಗೆ ಸಹಮತ ವ್ಯಕ್ತಪಡಿಸಿದ್ದು, ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರ ಬಗ್ಗೆ ಅವು ಉಲ್ಲೇಖಿಸುತ್ತವೆ. ಜನವರಿಯಲ್ಲಿ ೧೭ ಸಶಸ್ತ್ರ ಗುಂಪುಗಳ ಒಕ್ಕೂಟವಾದ ಕುಕಿ ನ್ಯಾಷನಲ್ ಆರ್ಗನೈಸೇಶನ್ ಗಸಗಸೆ ಕೃಷಿಯಲ್ಲಿ ತೊಡಗಿರುವವರಿಗೆ ಕಠಿಣ ಎಚ್ಚರಿಕೆ ನೀಡಿತು. ೨೦೧೬ರಿಂದಲೇ ಗಸಗಸೆ ಕೃಷಿ ನಿಷೇಧಿಸಲಾಗಿದ್ದರೂ, ಕೆಲ ವ್ಯಕ್ತಿಗಳು ಅದನ್ನು ಮುಂದುವರಿಸಿದ್ದಾರೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು ಎನ್ನುತ್ತವೆ ವರದಿಗಳು.
ಮಾದಕ ದ್ರವ್ಯ ವ್ಯವಹಾರದ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿರುವುದು ಸರಿಯಾಗಿಯೇ ಇದೆ ಎಂಬುದನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ಅದಕ್ಕೆ ಅನುಸರಿಸುತ್ತಿರುವ ಕ್ರಮ ಸರಿಯಾಗಿಲ್ಲ ಎಂಬುದು ತಕರಾರು. ಮುಖ್ಯಮಂತ್ರಿಯ ದ್ವೇಷದ ಮಾತುಗಳು ಬಹಳ ಸಲ ಬಿಕ್ಕಟ್ಟು ಸೃಷ್ಟಿಸಿವೆ ಎಂಬುದನ್ನು ಅವರ ಆಪ್ತ ವಲಯದವರೇ ಒಪ್ಪುತ್ತಾರೆ ಎಂದೂ ವರದಿಗಳು ಹೇಳುತ್ತವೆ. ಇದು ಅತ್ಯಂತ ಸೂಕ್ಷ್ಮ ವಿಚಾರ. ಮುಖ್ಯಮಂತ್ರಿ ಅನಗತ್ಯ ಮಾತನಾಡುವುದು ಸರಿಯಲ್ಲ ಎಂಬುದು ಮೈತೈ ಸಮುದಾಯದವರೇ ಹೇಳುವ ಮಾತು. ಮಾದಕ ದ್ರವ್ಯದ ಕಾರಣದಿಂದ ಮಣಿಪುರ ಇಡೀ ಪೀಳಿಗೆಯನ್ನೇ ಕಳೆದುಕೊಂಡಿರುವಾಗ ಅದರ ನಿರ್ಮೂಲನೆಗೆ ಮುಂದಾಗಿರುವುದನ್ನು ಯಾರೂ ದೂಷಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ನಿಭಾಯಿಸಬೇಕು ಎನ್ನುವ ಅಭಿಪ್ರಾಯಗಳಿವೆ.
ಬಹುಶಃ ಮಾದಕ ದ್ರವ್ಯ ವಿರುದ್ಧದ ಹೋರಾಟದ ನೆಪದಲ್ಲಿ ಕುಕಿ ಸಮುದಾಯದ ವಿರುದ್ಧ ಸೇಡಿನ ಮತ್ತು ದಮನಕಾರಿ ನೀತಿಯನ್ನು ಬಿಜೆಪಿ ಸರಕಾರ ಅನುಸರಿಸುತ್ತಿದೆ ಎಂಬ ಅನುಮಾನಗಳೇ ವ್ಯಾಪಕ ವಾಗಿರುವುದು ಮತ್ತು ಅದು ಬಿಜೆಪಿಯ ರಾಜಕೀಯದ ಭಾಗವೇ ಆದಂತಿರುವುದು ಸದ್ಯದ ಬಿಕ್ಕಟ್ಟಿನಲ್ಲಿ ಎದ್ದುಕಾಣುತ್ತಿರುವ ವಿಚಾರ.
( ಆಧಾರ: scroll.in, ಇತರ ವರದಿಗಳು)







