ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು

ಮಂಡ್ಯ, ಜೂ.20: ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲನಿ ಬಳಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಮೂವರು ಸಾವನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ವರದಿಯಾಗಿದೆ.
ಉತ್ತರಪ್ರದೇಶ ಮೂಲದ ಇಬ್ಬರು ಮತ್ತು ಕಾರು ಚಾಲಕ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಮೂಲದ ನೀರಜ್ ಕುಮಾರ್ (55), ಸೆಲ್ವಿ (50) ಮತ್ತು ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕಾರು ಚಾಲಕ ನವೀನ್ ಕುಮಾರ್ ಸಾವನಪ್ಪಿದವರಾಗಿದ್ದಾರೆ. ಶ್ರೀ ವಾತ್ಸವ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕಾರು ಮೊದಲು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ, ನಂತರ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಕಾರ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ವಾತ್ಸವ್ ತಮ್ಮ ತಂದೆ ತಾಯಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶ್ರೀ ವಾತ್ಸವ್ ತಾಯಿ ಸೆಲ್ವಿ, ತಂದೆ ನೀರಜ್ ಕುಮಾರ್ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಶ್ರೀ ವಾತ್ಸವ್ ಗಾಯಗೊಂಡಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








