ಕೇಂದ್ರ ಸರಕಾರದ ಅಕ್ಕಿ ಕಾಳಿನ ಮೇಲೆ ಕರ್ನಾಟಕದ ಹೆಸರಿಲ್ಲ!

ಅಕ್ಕಿಯ ಹೆಸರಿನಲ್ಲಿ ರಾಜಕಾರಣ ಶುರುವಾಗಿದೆ. ಕರ್ನಾಟಕ ಸರಕಾರದ ಅತಿ ಮಹತ್ವದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿಯ ಲಭ್ಯತೆಯನ್ನು ಕೇಂದ್ರ ಸರಕಾರ ತಡೆಯುತ್ತಿರುವುದಾಗಿ ರಾಜ್ಯ ಕಾಂಗ್ರೆಸ್ ಸರಕಾರ ಆರೋಪಿಸಿದೆ. ರಾಜ್ಯದ ಅಕ್ಕಿ ಯೋಜನೆಗೆ ಕಲ್ಲುಹಾಕುವ ಮೂಲಕ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ದೇಶದ ಅಕ್ಕಿ ಉತ್ಪಾದನೆಯ ಸಮಗ್ರ ನೋಟವೊಂದನ್ನು ಕೊಡುವ ಯತ್ನ ಇಲ್ಲಿದೆ.
ವಿಶ್ವಾದ್ಯಂತ ಅಕ್ಕಿಯನ್ನು ಉತ್ಪಾದಿಸುವ ಅಗ್ರ ರಾಷ್ಟ್ರಗಳಲ್ಲಿ ಭಾರತ ಒಂದಾಗಿದ್ದು, ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಚೀನಾ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ.
ಅಕ್ಕಿ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಪ್ರಧಾನ ಆಹಾರ ಬೆಳೆ. ಭಾರತದಲ್ಲಿ, ಭತ್ತವನ್ನು ಸುಮಾರು 44-45 ಮಿಲಿಯನ್ ಹೆಕ್ಟೇರ್ ಭೂಮಿಯಲ್ಲಿ ಖಾರಿಫ್ ಮತ್ತು ರಬಿ ಋತುಗಳಲ್ಲಿ ಬೆಳೆಯಲಾಗುತ್ತದೆ. ಇದು ಒಟ್ಟು ಬೆಳೆ ಪ್ರದೇಶದ ಸುಮಾರು ಶೇ. 22-23ರಷ್ಟು. ವೈಜ್ಞಾನಿಕವಾಗಿ ಹೇಳುವುದಾದರೆ, ಸುಮಾರು 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು 100 ಸೆಂ.ಮೀ.ಗಿಂತ ಹೆಚ್ಚು ಮಳೆ ಅಕ್ಕಿ ಉತ್ಪಾದನೆಗೆ ಅಗತ್ಯ.
ಅಕ್ಕಿ ಉತ್ಪಾದನೆ ನಮ್ಮಲ್ಲಿ 1980ರ ಹೊತ್ತಿಗೆ 53.6 ಮಿಲಿಯನ್ ಟನ್ಗಳಷ್ಟು ಇದ್ದದ್ದು ಈಗ 2022-23ರಲ್ಲಿ 131 ಮಿಲಿಯನ್ ಟನ್ಗಳನ್ನು ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ.
ವಿಶ್ವ ಅಕ್ಕಿ ಮಾರುಕಟ್ಟೆಗಳಲ್ಲಿ ಸಹಜವಾಗಿಯೇ ಭಾರತದ ಪಾತ್ರ ಪ್ರಮುಖವಾಗಿದೆ. ಭಾರತವು ಜಾಗತಿಕ ಮಾರುಕಟ್ಟೆಗೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ಪ್ರಮುಖ ರಾಷ್ಟ್ರ. ಭಾರತದಲ್ಲಿ ಉತ್ಪಾದನೆಯಾಗುವ ಬಹುಪಾಲು ಅಕ್ಕಿ ಬಾಸ್ಮತಿ ಅಕ್ಕಿಯಾಗಿದೆ. ಇದು ದೇಶದ ಪ್ರಮುಖ ರಫ್ತು ಸರಕು. ಭಾರತವು 4.25 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿಯನ್ನು ಉತ್ಪಾದಿಸಿದೆ ಎಂದು ಭಾವಿಸಲಾಗಿದೆ, ಅಥವಾ ಪ್ರಪಂಚದಾದ್ಯಂತ ಉತ್ಪಾದನೆಯಾಗುವ ಬಾಸ್ಮತಿ ಅಕ್ಕಿಯ ಸುಮಾರು ಶೇ. 75ರಷ್ಟು ಭಾರತದಲ್ಲಿಯೇ ಆಗುತ್ತದೆ ಎನ್ನಲಾಗುತ್ತದೆ. ಭಾರತ ತನ್ನ ಒಟ್ಟು ಬಾಸ್ಮತಿ ಅಕ್ಕಿ ಉತ್ಪಾದನೆಯ ಮೂರನೇ ಎರಡರಷ್ಟನ್ನು ರಫ್ತು ಮಾಡುತ್ತದೆ. ಇಂಗ್ಲೆಂಡ್, ಅಮೆರಿಕ ಮಾತ್ರವಲ್ಲದೆ, ಇರಾನ್ ಮತ್ತು ಸೌದಿ ಅರೇಬಿಯಗಳಲ್ಲೂ ಭಾರತೀಯ ಬಾಸ್ಮತಿ ಅಕ್ಕಿಗೆ ಭಾರೀ ಬೇಡಿಕೆ.
ಪ್ರಸಕ್ತ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್, ತಮಿಳುನಾಡು, ಒಡಿಶಾ, ಬಿಹಾರ, ಅಸ್ಸಾಂ, ಕೇರಳ ಮತ್ತು ಛತ್ತೀಸ್ಗಡಗಳು ಭಾರತದ ಪ್ರಮುಖ ಅಕ್ಕಿ ಪೂರೈಕೆದಾರ ರಾಜ್ಯಗಳು. ಭಾರತದ ಒಟ್ಟು ಅಕ್ಕಿ ಬೆಳೆಯುವ ಭೂಮಿಯಲ್ಲಿ ಸುಮಾರು ಶೇ. 72ರಷ್ಟು ಪ್ರದೇಶಗಳು ಈ ರಾಜ್ಯಗಳಿಗೆ ಸೇರಿವೆ. ಇವು ದೇಶದ ಶೇ. 75ಕ್ಕಿಂತ ಹೆಚ್ಚು ಅಕ್ಕಿಯನ್ನು ಉತ್ಪಾದಿಸುತ್ತವೆ.
2023ರ ಆರ್ಥಿಕ ವರ್ಷದಲ್ಲಿ ರಫ್ತು ನಿಷೇಧದ ಹೊರತಾಗಿಯೂ, 17 ಮಿಲಿಯನ್ ಟನ್ ಸಾಮಾನ್ಯ ಅಕ್ಕಿ ಹಾಗೂ 4.5 ಮಿಲಿಯನ್ ಟನ್ ಬಾಸ್ಮತಿ ಅಕ್ಕಿ ರಫ್ತಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಆದರೆ ಈಚಿನ ವರ್ಷಗಳಲ್ಲಿ ಅಕ್ಕಿ ಉತ್ಪಾದನೆ ಸವಾಲಾಗುತ್ತಿದೆ ಎಂಬುದೂ ನಿಜ.
‘ದಿ ಎಕನಾಮಿಸ್ಟ್’ ವಿಶ್ಲೇಷಣೆ ಪ್ರಕಾರ, ಭಾರತದಲ್ಲಿ ಮುಖ್ಯವಾಗಿ ಅನಿಯಮಿತ ಮಳೆ, ಮಣ್ಣಿನ ಫಲವತ್ತತೆ ನಾಶ ಇತ್ಯಾದಿಗಳು ಸವಾಲುಗಳಾಗಿವೆ. ದೇಶದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ನ ಮೇಲೆ ಹೆಚ್ಚು ಅವಲಂಬಿತವಾಗಿರುವ ಬೆಳೆ ಇದು. ಮುಂಗಾರು ಮಳೆ ಕೊರತೆಯಾದರೆ ಮುಖ್ಯವಾಗಿ ನೀರಾವರಿ ಸೌಲಭ್ಯಗಳು ಸೀಮಿತವಾಗಿರುವ ಮತ್ತು ಕಡಿಮೆ ಇರುವ ವಲಯಗಳಲ್ಲಿ ಈ ಬೆಳೆಯ ಉತ್ಪಾದನೆಯ ಮೇಲೆ ಅದು ಪರಿಣಾಮ ಬೀರುತ್ತದೆ.
ಇನ್ನು ಅಧ್ಯಯನಗಳು ಪಟ್ಟಿ ಮಾಡಿರುವಂತೆ ಅಕ್ಕಿ ಉತ್ಪಾದನೆಯಲ್ಲಿ ಸಣ್ಣ ರೈತರು ಎದುರಿಸುವ ಮುಖ್ಯ ಸವಾಲುಗಳೆಂದರೆ, ರೈತರ ಆರ್ಥಿಕ ಸ್ಥಿತಿ ಉತ್ತಮವಿಲ್ಲದಿರುವುದು, ಉತ್ತಮ ಗುಣಮಟ್ಟದ ಬೀಜಗಳ ಕೊರತೆ, ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದ ಕೊರತೆ, ನೀರಾವರಿಯಲ್ಲಿನ ಸಮಸ್ಯೆ, ಸಣ್ಣ ಮತ್ತು ತುಂಡುಭೂಮಿ, ಸೂಕ್ತ ಮಾರುಕಟ್ಟೆ ಲಭ್ಯತೆಯ ಕೊರತೆ, ಸಾಗಾಟದ ಸಮಸ್ಯೆ.
ಅಸಮ ಹವಾಮಾನ ಮತ್ತು ಹವಾಮಾನ ಬದಲಾವಣೆಯ ಪ್ರಭಾವದಿಂದ ಈ ಬೆಳೆ ಎದುರಿಸುತ್ತಿರುವ ಸವಾಲನ್ನು ನೇರವಾಗಿ ಬೀಜ ಬಿತ್ತನೆ ಮಾಡುವ ಡಿಎಸ್ಆರ್ ಎಂಬ ಆಧುನಿಕ ಕೃಷಿ ತಂತ್ರಗಳ ಮೂಲಕ ಸ್ವಲ್ಪಮಟ್ಟಿಗೆ ಪರಿಹರಿಸಬಹುದು ಎನ್ನುತ್ತಾರೆ ಪರಿಣಿತರು. ಹಲವಾರು ವರ್ಷಗಳಿಂದ ಇದ್ದರೂ, ಭಾರತದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಡಿಎಸ್ಆರ್ ಹೆಚ್ಚು ಬಳಕೆಯಲ್ಲಿಲ್ಲ.
ಆದರೆ ಈ ಪದ್ಧತಿ ಬಗ್ಗೆ ಅನೇಕ ರೈತರ ದೂರುಗಳೆಂದರೆ, ಸಾಂಪ್ರದಾಯಿಕ ಪದ್ಧತಿಗಿಂತ ಇದರಲ್ಲಿ ಇಳುವರಿ ಕೆಲವೊಮ್ಮೆ ಕಡಿಮೆ. ಸಾಮಾನ್ಯ ವಿಧಾನಕ್ಕೆ ಹೋಲಿಸಿದರೆ ಇದು ಕೀಟಗಳಿಗೆ ತುತ್ತಾಗುವುದೂ ಜಾಸ್ತಿಯೇ.
ಆದರೆ ಪರಿಣಿತರು ಹೇಳುವ ಪ್ರಕಾರ, ಡಿಎಸ್ಆರ್ ಒಂದು ಉತ್ತಮ ವಿಧಾನ ಏಕೆಂದರೆ ಇದಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಮಣ್ಣಿನ ಗುಣಮಟ್ಟವೂ ಉಳಿಯುತ್ತದೆ.
ಇನ್ನು, ಈಗ ವಿವಾದಕ್ಕೆ ಕಾರಣವಾಗಿರುವ ಕೇಂದ್ರದ ನಡೆ ಮತ್ತು ಕೇಂದ್ರ ಬಳಿ ದಾಸ್ತಾನಿರುವ ಅಕ್ಕಿಯ ವಿಚಾರ.
ರಾಜ್ಯ ಸರಕಾರಗಳಿಗೆ ಅಕ್ಕಿಯನ್ನು ಮಾರಾಟ ಮಾಡಬಾರದು ಎಂದು ಭಾರತೀಯ ಆಹಾರ ನಿಗಮಕ್ಕೆ (ಎಫ್ಸಿಐ) ಕೇಂದ್ರ ಸರಕಾರ ಸೂಚಿಸಿರುವುದು ಈಗ ವಿವಾದ ಸೃಷ್ಟಿಸಿರುವ ವಿಚಾರ.
ಕೇಂದ್ರದ ಬಳಿ ಇರುವ ಹೆಚ್ಚುವರಿ ಆಹಾರ ಧಾನ್ಯದ ದಾಸ್ತಾನು 181 ಲಕ್ಷ ಟನ್. ಕರ್ನಾಟಕ ಸರಕಾರ ಬಡವರಿಗೆ ಕೊಡಲು ಬೇಕಿರುವ ಹೆಚ್ಚುವರಿ ಅಕ್ಕಿ ವರ್ಷಕ್ಕೆ ಕೇವಲ 1.66 ಲಕ್ಷ ಟನ್. ಇಷ್ಟನ್ನು ಕೊಡಲು ಈಗ ಅಡ್ಡಗಾಲು ಹಾಕುತ್ತಿರುವುದೇಕೆ ಎಂಬುದೇ ಈಗ ಎದ್ದಿರುವ ಪ್ರಶ್ನೆ.
ಅಲ್ಲದೆ, ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕ 25.56 ಲಕ್ಷ ಟನ್ಗಳಷ್ಟು ಆಹಾರ ಧಾನ್ಯವನ್ನು ನಿಗದಿ ಮಾಡಲಾಗಿದ್ದು, ಅಷ್ಟು ಪ್ರಮಾಣದ ಆಹಾರ ಧಾನ್ಯವನ್ನು ಕೇಂದ್ರ ಸರಕಾರ ಒದಗಿಸಲೇಬೇಕಲ್ಲವೇ ಎಂಬ ಪ್ರಶ್ನೆಯೂ ಇದೆ.
ಅನ್ನಭಾಗ್ಯ ಯೋಜನೆಗೆ ಪ್ರತೀ ತಿಂಗಳು ಹೆಚ್ಚುವರಿಯಾಗಿ ಬೇಕಿರುವ ಅಕ್ಕಿ 13,819.5 ಟನ್ಗಳು. ಅಂದರೆ ವರ್ಷಕ್ಕೆ ಹೆಚ್ಚುವರಿಯಾಗಿ 1.66 ಲಕ್ಷ ಟನ್ಗಳಷ್ಟು ಅಕ್ಕಿ ಬೇಕಾಗುತ್ತದೆ. ಒಎಂಎಸ್ಎಸ್ ಯೋಜನೆ ಅಡಿಯಲ್ಲಿ, ಹೆಚ್ಚುವರಿ ಅಕ್ಕಿಯನ್ನು ಪ್ರತೀ ಕ್ವಿಂಟಾಲ್ಗೆ 3,400 ರೂ. ನಂತೆ ಖರೀದಿಗೆ ಅವಕಾಶ ನೀಡಲು ರಾಜ್ಯ ಸರಕಾರ ಎಫ್ಸಿಐ ಅನ್ನು ಕೋರಿತ್ತು. ರಾಜ್ಯದ ಐದು ಕಡೆ ಇರುವ ಎಫ್ಸಿಐ ಗೋದಾಮುಗಳಲ್ಲಿ ಮೇ ಅಂತ್ಯಕ್ಕೆ 6.59 ಲಕ್ಷ ಟನ್ಗಳಷ್ಟು ಅಕ್ಕಿಯ ಸಂಗ್ರಹವಿತ್ತು. ಹೆಚ್ಚುವರಿ ಅಕ್ಕಿ ಖರೀದಿಗೆ ಎಫ್ಸಿಐ ಅನುಮೋದನೆಯನ್ನೂ ನೀಡಿತ್ತು. ಹೀಗಿರುವಾಗಲೇ, ಎಫ್ಸಿಐ ಅನುಮೋದನೆ ನೀಡಿದ ಮರುದಿನವೇ ಕೇಂದ್ರ ಸರಕಾರ ಒಎಂಎಸ್ಎಸ್ ಅಡಿಯಲ್ಲಿ ರಾಜ್ಯ ಸರಕಾರಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟ ಮಾಡುವುದನ್ನು ನಿಲ್ಲಿಸಿದೆ.
ವಿಪರ್ಯಾಸವೆಂದರೆ, ವಾಯುಮಾಲಿನ್ಯ ತಡೆಯಲು ಪೆಟ್ರೋಲ್ಗೆ ಬೆರೆಸುವ ಎಥೆನಾಲ್ ಉತ್ಪಾದನೆಗೆ ಗುಣಮಟ್ಟದ ಅಕ್ಕಿ ಬಳಸಲು ಕೇಂದ್ರದ ಯಾವ ತಕರಾರೂ ಇಲ್ಲ. ಮಾನವ ಬಳಕೆಗೆ ಉಪಯುಕ್ತವಲ್ಲದ ಅಕ್ಕಿ ಮತ್ತಿತರ ಆಹಾರ ಧಾನ್ಯಗಳನ್ನು ಬಳಸಿ ತಯಾರಿಸಬೇಕಿರುವ ಎಥೆನಾಲ್ಗೆ ಗುಣಮಟ್ಟದ ಅಕ್ಕಿ ಬಳಸುವುದಕ್ಕೂ ಅನುಮತಿ ಕೊಡಲಾಗಿದೆ.
2019ರಿಂದ 2023ರವರೆಗೆ ಎಥೆನಾಲ್ ಉತ್ಪಾದನೆಗೆ ನೀಡಲಾಗಿರುವ ಗುಣಮಟ್ಟದ ಅಕ್ಕಿ 29.05 ಲಕ್ಷ ಟನ್. 2022-23ನೇ ಆರ್ಥಿಕ ವರ್ಷವೊಂದರಲ್ಲಿಯೇ ನೀಡಲಾಗಿರುವ ಅಕ್ಕಿ 16 ಲಕ್ಷ ಟನ್. ಹೀಗಿರುವಾಗ, ಬಡವರಿಗೆ ಕೊಡುವ ಉದ್ದೇಶಕ್ಕೆ 1.66 ಲಕ್ಷ ಟನ್ ಅಕ್ಕಿ ಕೊಡಲು ಕೇಂದ್ರಕ್ಕೆ ಭಾರವಾಯಿತೆ?
ಜಾಗತಿಕ ಆಹಾರ ಭದ್ರತೆ ಸಾಧಿಸಲು ಸಾಮೂಹಿಕ ಕ್ರಮ ಅಗತ್ಯ ಎಂದು ಜಿ20 ಕೃಷಿ ಸಚಿವರ ಸಭೆಯಲ್ಲಿ ದೊಡ್ಡದಾಗಿ ಹೇಳುವ ಪ್ರಧಾನಿ, ಕರ್ನಾಟಕಕ್ಕೆ ಒಂದು ಪ್ರಮಾಣದ ಅಕ್ಕಿ ಒದಗಿಸಲು ಮನಸ್ಸು ಮಾಡದೆ ಸೇಡಿನ ರಾಜಕಾರಣಕ್ಕೆ ಮುಂದಾದಂತಿರುವುದು ವಿರೋಧಾಭಾಸ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಪ್ರಕಾರ, ಪೂರೈಕೆ ಸರಪಳಿಯ ಕೊರತೆಯಿಂದಾಗಿ ಭಾರತದಲ್ಲಿ ಪ್ರತೀ ವರ್ಷ ಶೇ. 11ರಿಂದ ಶೇ.15ರಷ್ಟು ಆಹಾರ ಧಾನ್ಯಗಳು ವ್ಯರ್ಥವಾಗುತ್ತವೆ. ಅಂದರೆ ಈ ಪ್ರಮಾಣ 275ರಿಂದ 375 ಲಕ್ಷ ಟನ್ಗಳಷ್ಟು.
ಆದರೆ ಒಂದೂವರೆ ಲಕ್ಷ ಟನ್ ಹೆಚ್ಚುವರಿ ಅಕ್ಕಿಯನ್ನು ದುಡ್ಡು ಕೊಟ್ಟು ಖರೀದಿಸಿ ಬಡವರಿಗೆ ಕೊಡುತ್ತೇವೆ ಎಂದರೆ ಅದಕ್ಕೆ ಮೋದಿ ಸರಕಾರ ಒಪ್ಪುತ್ತಿಲ್ಲ. ಅಂದಮೇಲೆ ಇವರಿಗೆ ಯಾವುದರ ಬಗ್ಗೆ ಯಾರ ಬಗ್ಗೆ ಕಾಳಜಿ ಇದೆ?
ಭಾರತದ ಅಕ್ಕಿ ರಫ್ತು
2013-14ರಲ್ಲಿ ಭಾರತದ ಬಾಸ್ಮತಿಯೇತರ ಅಕ್ಕಿ ರಫ್ತು 2,925 ದಶಲಕ್ಷ ಡಾಲರ್ನಷ್ಟಿತ್ತು. 2021-22ರಲ್ಲಿ ಅದು 6,115 ದಶಲಕ್ಷ ಡಾಲರ್ಗೆ ಏರಿಕೆಯಾಗಿದೆ. ಅಂದರೆ ಶೇ. 109ರಷ್ಟು ಏರಿಕೆ ಆದಂತಾಗಿದೆ. ಈ ನಡುವೆ, 2019-20ರಲ್ಲಿ ರಫ್ತಾಗಿರುವ ಬಾಸ್ಮತಿಯೇತರ ಅಕ್ಕಿಯ ಮೌಲ್ಯ 2,015 ದಶಲಕ್ಷ ಡಾಲರ್. 2020-21ರಲ್ಲಿ 4,799 ದಶಲಕ್ಷ ಡಾಲರ್
ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಸ್ಟ್ಯಾಟಿಸ್ಟಿಕ್ಸ್ (ಡಿಜಿಸಿಐಎಸ್) ಅಂಕಿಅಂಶದ ಪ್ರಕಾರ, ಭಾರತ 2021-22ರಲ್ಲಿ ವಿಶ್ವದಾದ್ಯಂತ 150ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡಿದೆ. ಆ 150 ದೇಶಗಳ ಪೈಕಿ 76 ದೇಶಗಳಿಗೆ ಒಂದು ದಶಲಕ್ಷ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಅಕ್ಕಿ ರಫ್ತು ಮಾಡಿದೆ
ಪಶ್ಚಿಮ ಆಫ್ರಿಕಾದ ಬೆನಿನ್, ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದು.
ಭಾರತದ ಅಕ್ಕಿ ರಫ್ತಾಗುವ ಇತರ ದೇಶಗಳೆಂದರೆ, ನೇಪಾಳ, ಬಾಂಗ್ಲಾದೇಶ, ಚೀನಾ, ಐವರಿ ಕೋಸ್ಟ್, ಟೊಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್, ಸೊಮಾಲಿಯಾ, ಮಲೇಶ್ಯ, ಲೈಬೀರಿಯಾ, ಯು.ಎ.ಇ.
2020-21ರಲ್ಲಿ, ಮೊದಲ ಬಾರಿಗೆ ಪೂರ್ವ ತಿಮೊರ್ , ಪೋರ್ಟೊರಿಕೊ, ಬ್ರೆಝಿಲ್, ಪಪುವಾ ನ್ಯೂ ಗಿನಿಯಾ, ಝಿಂಬಾಬ್ವೆ, ಬುರುಂಡಿ, ಎಸ್ವಾಟಿನಿ, ಮ್ಯಾನ್ಮಾರ್ ಮತ್ತು ನಿಕರಾಗುವಾಗಳಿಗೆ ಬಾಸ್ಮತಿಯೇತರ ಅಕ್ಕಿ ರವಾನಿಸಿದೆ.
ಆಫ್ರಿಕನ್, ಏಶ್ಯನ್ ಮತ್ತು ಯುರೋಪಿಯನ್ ಯೂನಿಯನ್ ಮಾರುಕಟ್ಟೆಗಳಲ್ಲಿ ಅಕ್ಕಿ ರಫ್ತು ವಿಸ್ತರಿಸಿಕೊಂಡಿರುವ ಕಾರಣದಿಂದ ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತ ಹೆಚ್ಚಿನ ಪಾಲನ್ನು ಹೊಂದಿದೆ. ನಿಶ್ಚಿತ ಜಾಗತಿಕ ಬೇಡಿಕೆ ಅಕ್ಕಿ ರಫ್ತಿನಲ್ಲಿ ಭಾರತದ ಬೆಳವಣಿಗೆಗೆ ನೆರವಾಗಿದೆ ಎಂದು ಸರಕಾರ ಹೇಳಿಕೊಂಡಿದೆ.







