ಗೂಡ್ಸ್ ಟೆಂಪೋ ಹರಿದು ಬಾಲಕಿ ಮೃತ್ಯು

ಮಂಡ್ಯ, ಜೂ.20: ಸರಕು ಸಾಗಾಣಿಕೆ ಟೆಂಪೋ ಹಿಂದಕ್ಕೆ ಸಂಚರಿಸುವ ವೇಳೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನಪ್ಪಿದ ಘಟನೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.
ಸರ್ವರ್ ಖಾನ್ ಎಂಬುವರ ಪುತ್ರಿ ಮೂರು ವರ್ಷದ ರಿಫಾ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ಸರ್ವರ್ ಖಾನ್ ಎಂಬುವರು ಗ್ರಾಮದ ರಾಜಶೇಖರ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಇವರ ಪುತ್ರಿ ರೀಫಾ ದಿನನಿತ್ಯದಂತೆ ಹಾಲು ತರಲು ಡೈರಿಗೆ ಬೆಳಿಗ್ಗೆ ಹೋಗಿದ್ದಳು. ಹಾಲು ಖರೀದಿಸಿ ಮನೆಗೆ ಪಾಪಸ್ಸಾಗುವಾಗ ರಸ್ತೆಯಲ್ಲಿ ನಿಂತಿದ್ದ ಮಿನಿ ಗೂಡ್ಸ್ ವಾಹನ ಚಾಲಕ ಗಂಗಾಧರ್ ಹಿಂದಕ್ಕೆ ಚಲಾಯಿಸುತ್ತಿದ್ದು, ಹಿಂದೆ ಇದ್ದ ಬಾಲಕಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಬಾಲಕಿಯ ಮೇಲೆ ವಾಹನದ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾಳೆನ್ನಲಾಗಿದೆ.
ಬಾಲಕಿ ಪೋಷಕರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು, ಚಾಲಕನ ಅಜಾಗರೂಕತೆ ವಿರುದ್ಧ ಆಕ್ರೋಶಿಸಿದ ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





