ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ; ಇದ್ರೀಸ್ ಪಾಷಾ ಹತ್ಯೆ ಆರೋಪಿಯ ಆಡಿಯೋ ವೈರಲ್

ಬೆಂಗಳೂರು: 'ಗೋವು ಕಡಿಯುವವರನ್ನು ಮತ್ತೆ ಹತ್ಯೆ ಮಾಡುತ್ತೇವೆ' ಎಂದು ಮಂಡ್ಯ ಮೂಲದ ಜಾನುವಾರು ವ್ಯಾಪಾರಿ ಇದ್ರೀಸ್ ಪಾಷಾ ಹತ್ಯೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬನ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಹೋರಾತ್ರ ಎಂಬುವವರು ತಮ್ಮ ಜೊತೆ ಆರೋಪಿಯು ಸುಮಾರು 20 ನಿಮಿಷಗಳ ಕಾಲ ಮಾತನಾಡಿರುವ ಫೋನ್ ಸಂಭಾಷಣೆಯ ಆಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಹೋರಾತ್ರ ಅವರು ಮಾತನಾಡುತ್ತಾ, ''ಇದ್ರೀಸ್ ಪಾಷಾನನ್ನು ಪುನೀತ್ ಕೆರೆಹಳ್ಳಿ ಜೊತೆ ಸೇರಿ ಏಕೆ ಕೊಂದಿದ್ದು? ನೀವು ಪೊಲೀಸರಿಗೆ ಹಿಡಿದುಕೊಟ್ಟಿದ್ದರೆ ಸಾಕಿತ್ತಲ್ವಾ? ಅಲ್ಲೇ ಪೊಲೀಸ್ ಠಾಣೆ ಇತ್ತಲ್ವಾ, ಕೊಲೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದಾಗ, ''ದನ ಕಡಿಯೋದು ತಪ್ಪಲ್ವಾ ? ದನ ಕಡಿಯುವವರನ್ನು ನಾವು ಕಡಿಯುತ್ತೇವೆ'' ಎಂದು ಆತ ಹೇಳುತ್ತಾನೆ.
ಅಹೋರಾತ್ರ ಮತ್ತೆ ಮಾತನಾಡಿ, ''ಆ ಸೂಲಿಬೆಲೆ ನಿಮ್ಮನ್ನು ಜೈಲಿಂದ ಹೊರಗೆ ಕರೆಸಿಕೊಂಡು, ಮನೆಗೆ ಕರೆದುಕೊಂಡು ಹೋಗಿ ನಿಮಗೆ ಊಟ ಹಾಕಿದ್ದು ಏಕೆ?, ಜಗತ್ತಿನ ಯಾವ ಧರ್ಮವೂ ಕೊಲ್ಲು ಎಂದು ಹೇಳಿಕೊಡುವುದಿಲ್ಲ. ನೀವು ಆ ಮುಸ್ಲಿಮ್ ವ್ಯಕ್ತಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದು ವಿಡಿಯೋ ವೈರಲ್ ಆಗಿತ್ತಲ್ವಾ, ಏಕೆ ಆ ರೀತಿ ಮಾಡಿದ್ದು? '' ಎಂದು ಪ್ರಶ್ನಿಸಿದ್ದಾರೆ. ಆದರೆ ಆರೋಪಿಗಳು ಕೊಲ್ಲಲು ನೀನೆ ಹೇಳಿದ್ದು, ನೀನೆ ಮಾಡಿದ್ದು. ಯಾರಾದರೂ ಸಾಬರು ನಿನಗೆ ಹೊಡೆಯಲು ಬಂದರೆ ನಮ್ಮನ್ನು ಕರಿ ಬರುತ್ತೇವೆ'' ಎಂದು ನಗುತ್ತಾ ಉತ್ತರಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ.
ಆಡಿಯೋದಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಲ್ಲದೇ ಅಹೋರಾತ್ರ ಅವರಿಗೂ ಬೆದರಿಕೆ ಹಾಕಿದ್ದಾರೆ. ಇನ್ನು ಆಡಿಯೋದಲ್ಲಿ ಕೊನೆಗೆ ಆಹೋರಾತ್ರ ಅವರು ಸಾತನೂರು ಪೊಲೀಸ್ ಠಾಣೆಗೆ ಫೋನ್ ಮಾಡಿ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಆರೋಪಿಗಳು ಬೆದರಿಕೆ ಹಾಕಿರುವ ಬಗ್ಗೆ ದೂರಿಕೊಂಡಿದ್ದಾರೆ. ಈ ವೇಳೆ ಪೊಲೀಸರು ನಾವು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇನ್ನು ಇದ್ರೀಸ್ ಪಾಶಾ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿಗಳಾಗಿರುವ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.







