ಪೂರ್ವ ತಯಾರಿ ಇಲ್ಲದೆ ಶಕ್ತಿ ಯೋಜನೆ ಜಾರಿ: ಕೋಟ ಶ್ರೀನಿವಾಸ ಪೂಜಾರಿ ಆರೋಪ

ಉಡುಪಿ, ಜೂ.20: ವಿದ್ಯುತ್ ದರ ಏರಿಕೆಗೂ ಬಿಜೆಪಿ ಸರಕಾರದ ವಿರುದ್ಧ ಬೊಟ್ಟು ಮಾಡಲಾಗುತ್ತಿದೆ. ನಮ್ಮ ಸರಕಾರದ ಅವಧಿಯಲ್ಲಿ ಕೆಇಆರ್‌ಸಿ ಪ್ರಸ್ತಾಪಕ್ಕೆ ಅನುಮೋದನೆ ಕೊಟ್ಟಿಲ್ಲ. ಸಿದ್ದರಾಮಯ್ಯ ಸರಕಾರ ಯಾಕೆ ವಿದ್ಯುತ್ ದರ ಏರಿಕೆ ಮಾಡಿದೆ. ಸರಿಯಾದ ಪೂರ್ವ ತಯಾರಿ ಇಲ್ಲದೆ ಶಕ್ತಿ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮ್ಮೆ ಪ್ರಧಾನಿ ನರೇಂದ್ರ ಮೋದಿಯನ್ನು ನರಹಂತಕ ಎಂದು ಹೇಳುತ್ತಾರೆ. ಅದೇ ಬಾಯಿಯಲ್ಲಿ ಅಕ್ಕಿ ಕೊಡಿ ಅಂತ ಕೇಳುತ್ತಾರೆ. 10 ಕೆಜಿ ಅಕ್ಕಿ ಕಾಂಗ್ರೆಸ್ ಕೊಟ್ಟ ಭರವಸೆಯೇ ಹೊರತು ನಮ್ಮ ಭರವಸೆ ಅಲ್ಲ. ಅಕ್ಕಿಯನ್ನು ಎಲ್ಲಿಂದ ಬೇಕಾದರೂ ಖರೀದಿ ಮಾಡಬಹುದು. ಅನಗತ್ಯ ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.
ಮಹಿಳಾ ಪ್ರಯಾಣಿಕರು ಹೆಚ್ಚಿರುವುದರಿಂದ ಬಸ್‌ಗಳ ಬಾಗಿಲು ಮುರಿದು ಹೋಗುತ್ತಿದೆ. ಯೋಜನೆ ಜಾರಿಗೆ ತರುವ ಮೊದಲು ಒಂದೇ ಒಂದು ಬಸ್ಸಿನ ಸಂಖ್ಯೆ ಹೆಚ್ಚು ಮಾಡಿಲ್ಲ. ಮಹಿಳೆಯರು, ಮಕ್ಕಳು ಕೈ ಅಡ್ಡ ಹಾಕಿದರೂ ಸರಕಾರಿ ಬಸ್ ನಿಲ್ಲಿಸುವುದಿಲ್ಲ. ಆಟೋ ಚಾಲಕರು ಪ್ರಯಾಣಿಕರಿಲ್ಲದೆ ಕಂಗಾಲಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದಾಗಿ ಕೌಟುಂಬಿಕ ಕಲಹಗಳು ಆರಂಭವಾಗಿವೆ ಎಂದು ಅವರು ದೂರಿದರು.
ವಿರೋಧ ಪಕ್ಷದ ನಾಯಕರನ್ನು ಸಿದ್ದರಾಮಯ್ಯ, ಡಿಕೆಶಿ ಹೇಳಿ ನೇಮಕ ಮಾಡಬೇಕಾಗಿಲ್ಲ. ಸೋಲು ಗೆಲುವಿಗೆ ಎಲ್ಲರೂ ಹೊಣೆಗಾರರಾಗಬೇಕೇ ಹೊರತು ಒಬ್ಬರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ. ಬಿಜೆಪಿಯ ಚುನಾವಣಾ ನಿರ್ವಹಣೆಯ ಸಫಲತೆಯಲ್ಲಿ ಕಾರ್ಯಕರ್ತರ ಪರಿಶ್ರಮ ಇದೆ. ಇದು ಬಿಜೆಪಿ ರಾಜ್ಯಾಧ್ಯಕ್ಷರ ವಿಫಲತೆ ಅಲ್ಲ ಎಂದರು.
ಈ ಸರಕಾರಕ್ಕೆ ಹಿಂದುಗಳ ಹೆಸರು ಕೇಳಿದರೆ ಆಗಲ್ಲ. ಧಾರ್ಮಿಕ ಸಂರಕ್ಷಣಾ ಕಾಯ್ದೆಯು ವಂಚನೆ, ಸಂಚು, ಆಮಿಷ, ಬಲತ್ಕಾರದ ಮತಾಂತರವನ್ನು ಮಾತ್ರ ನಿಷೇಧ ಮಾಡಿದೆ. ಯಾರಾದರೂ ಸ್ವ ಇಚ್ಛೆಯಿಂದ ಹೋಗುವುದಾದರೆ ಮುಕ್ತ ಅವಕಾಶ ಇದೆ. ಹಿಂದೂ ಧರ್ಮಕ್ಕೆ ಆಗುವ ಅನ್ಯಾಯ ತಡೆಯುವ ಮಸೂದೆ ಎಂಬ ಕಾರಣಕ್ಕೆ ರದ್ದು ಮಾಡಲಾಗುತ್ತಿದೆ. ಟೌನ್‌ಹಾಲ್ ಎದುರು ಗೋಮಾಂಸ ತಿನ್ನುವವರಿಗೆ ಹಿತವಾಗಲಿ ಎಂದು ಗೋಹತ್ಯ ನಿಷೇಧ ಕಾಯಿದೆ ಹಿಂಪಡೆಯುವ ನಿರ್ಧಾರವನ್ನು ಮಾಡಿದ್ದಾರೆ. ಸರಕಾರದ ಈ ಹಿಂದೂ ವಿರೋಧಿ ನಿಲುವಿನ ವಿರುದ್ಧ ಸದನದ ಹೊರಗೆ ಹಾಗೂ ಒಳಗೆ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ಸರಕಾರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಗೃಹ ಸಚಿವ ಅಶೋಕ್ ಸಹಿತ ಬಿಜೆಪಿ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ಈ ಮೂಲಕ ಸರಕಾರ ಪ್ರತಿಪಕ್ಷವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲೇನು ತುರ್ತು ಪರಿಸ್ಥಿತಿ ಇದೆಯೇ ಎಂದು ಅವರು ಪ್ರಶ್ನಿಸಿದರು.







