ವಿಧಾನ ಪರಿಷತ್ ಗೆ ನಾಮ ನಿರ್ದೇಶನ: ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ಕಾಂಗ್ರೆಸ್?

ಬೆಂಗಳೂರು: ವಿಧಾನ ಪರಿಷತ್‌ಗೆ ನಾಮಕರಣಗೊಳ್ಳಬೇಕಿರುವ ಮೂವರು ನಾಯಕರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಶಿಕ್ಷಣ ಕ್ಷೇತ್ರದ ಮನ್ಸೂರ್ ಅಲಿ ಖಾನ್ ಹಾಗೂ ಎಂ.ಆರ್.ಸೀತಾರಾಮ್ ಹಾಗೂ ಕೆಪಿಸಿಸಿಯ ಮಾಜಿ ಸಹ ಅಧ್ಯಕ್ಷರೂ ಆಗಿದ್ದ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಸುಧಾಮ ದಾಸ್ ಹೆಸರನ್ನು ನಾಮನಿರ್ದೇಶನ ಮಾಡಲು ಅಂತಿಮಗೊಳಿಸಿದೆ. ಸುಧಾಮ ದಾಸ್ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯ ಬಣಕ್ಕೆ ಸೇರಿದವರಾಗಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಈ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಪಕ್ಷದ ಕೇಂದ್ರ ನಾಯಕತ್ವಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಈ ಹೆಸರುಗಳಿಗೆ ಕೇಂದ್ರ ನಾಯಕತ್ವ ಅನುಮೋದನೆ ನೀಡಿದ್ದು, ಈ ಪಟ್ಟಿಯನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಒಪ್ಪಿಗೆಗೆ ಶೀಘ್ರವೇ ಸಲ್ಲಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಮೂವರೂ ನೇರವಾಗಿ ನಾಮನಿರ್ದೇಶನಗೊಂಡಿರುವುದರಿಂದ ಇವರ್ಯಾರೂ ಚುನಾವಣೆ ಎದುರಿಸಬೇಕಾದ ಅಗತ್ಯವಿಲ್ಲ. ಈ ಮೂವರು ನಾಮಕರಣಗೊಂಡ ಸದಸ್ಯರು ಮೇ-ಜೂನ್ ತಿಂಗಳಲ್ಲಿ ತಮ್ಮ ಆರು ವರ್ಷದ ಅವಧಿಯನ್ನು ಪೂರೈಸಿರುವ ಮಾಜಿ ಮೇಯರ್ ಪಿ.ಆರ್.ರಮೇಶ್, ಚಿತ್ರ ನಿರ್ಮಾಪಕ ಮೋಹನ್ ಕೊಂಡಜ್ಜಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಿ.ಎಂ.ಲಿಂಗಪ್ಪನವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಒಟ್ಟು 11 ಮಂದಿ ನಾಮಕರಣಗೊಂಡ ಸದಸ್ಯರಿದ್ದು, ಈ ಪೈಕಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ, ಅಡಗೂರು ವಿಶ್ವನಾಥ್ ಹಾಗೂ ತಲ್ವಾರ್ ಸುಬ್ಬಣ್ಣ ಸೇರಿದಂತೆ ಐದು ಮಂದಿ ಸದಸ್ಯರಿದ್ದಾರೆ. ಜೆಡಿಎಸ್ ಪಕ್ಷದಿಂದ ಏಕೈಕ ಸದಸ್ಯರಾಗಿ ಕೆ.ಎ.ತಿಪ್ಪೇಸ್ವಾಮಿ ಇದ್ದಾರೆ. ಉಳಿದ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಪ್ರಕಾಶ್ ರಾಥೋಡ್ ಹಾಗೂ ಯು.ಬಿ.ವೆಂಕಟೇಶ್ ಸದಸ್ಯರಾಗಿದ್ದಾರೆ. ಖಾಲಿಯಾಗಿರುವ ಮೂರು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ ಮತ್ತೆ ಮೂವರು ಸದಸ್ಯರು ನಾಮಕರಣ ಸದಸ್ಯರಾಗಿ ನೇಮಕಗೊಳ್ಳುವುದರಿಂದ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಹೊಂದಿರುವ ಒಟ್ಟು ನಾಮಕರಣಗೊಂಡ ಸದಸ್ಯರ ಸಂಖ್ಯೆ ಪುನಃ ಐದಾಗಲಿದೆ. ಇದರೊಂದಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಮಕರಣಗೊಂಡ ಸದಸ್ಯರ ಸಂಖ್ಯೆ ಸಮಬಲವಾಗಲಿದೆ.







