ಜೂನ್ 30ರಂದು ಇ-ಕೆವೈಸಿಗೆ ಕೊನೆಯ ದಿನ
ಉಡುಪಿ, ಜೂ.20: ಕೃಷಿ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ಎಲ್ಲಾ ವರ್ಗದ ರೈತರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ 6000 ರೂ. ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರಿಂದ 4000 ರೂ.ಗಳನ್ನು ಎರಡು ಕಂತುಗಳಲ್ಲಿ ಒಟ್ಟು 10000 ರೂ.ಗಳನ್ನು ಪಡೆಯಲು, ಸಾಗು ವಳಿ ಭೂಮಿಯನ್ನು 2019ರ ಫೆಬ್ರವರಿ 1ರ ಒಳಗೆ ಹೊಂದಿರುವ ಸ್ವಾಧೀನದಲ್ಲಿರುವ ಹಾಗೂ ಭೂದಾಖಲೆಗಳಲ್ಲಿ ಹೆಸರಿರುವ ರೈತರು ಅರ್ಹರಾಗಿರುವರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೂ ನೋಂದಾಯಿಸದೇ ಇರುವ ಜಿಲ್ಲೆಯ ಅರ್ಹ ರೈತರು ಸ್ವಯಂ ಘೋಷಣಾ ಪತ್ರ, ಎಲ್ಲ ಸರ್ವೇ ನಂಬರ್‌ಗಳ ಪಹಣಿ, ಆಧಾರ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಿ, ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್‌ನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸುವುದು ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಜಿಲ್ಲೆಯ ಒಟ್ಟು ಆಧಾರ್ ದೃಢೀಕೃತ 1,53,801 ಮಂದಿ ರೈತರ ಪೈಕಿ 1,19,835 (ಶೇ.78) ರೈತರು ಕೆವೈಸಿ ಮಾಡಿಸಿದ್ದು, ಉಳಿದ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಪೋರ್ಟಲ್‌ನಲ್ಲಿ ಫಾರ್ಮರ್ಸ್‌ನ ಇ-ಕೆವೈಸಿ ಅವಕಾಶದಡಿ ಈಗಾಗಲೇ ಪಿ.ಎಂ. ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿರುವ ರೈತರ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದಾಗ ಮೊಬೈಲ್‌ಗೆ ಓಟಿಪಿ ರವಾನೆಯಾಗುತ್ತದೆ. ಓಟಿಪಿಯನ್ನು ದಾಖಲಿಸಿದಾಗ ತಂತ್ರಾಂಶಆಧಾರಿತ ಪರಿಶೀಲನೆ ನಂತರ ಕೆವೈಸಿ ಈಸ್ ಸಕ್ಸಸ್‌ಫುಲಿ ಸಬ್‌ಮಿಟೆಡ್ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಓ.ಟಿ.ಪಿ ಆಧಾರಿತವಾಗಿ ಫಲಾನುಭವಿ ಖುದ್ದಾಗಿ ಇ-ಕೆವೈಸಿ ಮಾಡಿಸಬಹುದಾಗಿದೆ. ಈಗಾಗಲೇ ಇ-ಕೆವೈಸಿ ಆಗಿದ್ದರೆ, ಆಗಿರುವ ಬಗ್ಗೆ ಸೂಚನೆ ಬರುತ್ತದೆ.
ಫಲಾನುಭವಿಯ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗದಿದ್ದಲ್ಲಿ ಅಥವಾ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಓ.ಟಿ.ಪಿ ಸ್ವೀಕೃತವಾಗದಿದ್ದಲ್ಲಿ ಅಂತಹವರು ನಾಗರೀಕ ಸೇವಾ ಕೇಂದ್ರ ಅಥವಾ ಗ್ರಾಮಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬಹುದು.
ಯೋಜನೆಯ ಮುಂದಿನ ಕಂತುಗಳ ಆರ್ಥಿಕ ನೆರವು ಪಡೆಯಲು ಜೂನ್ 30ರ ಒಳಗೆ ಇ-ಕೆವೈಸಿ ಮಾಡಿಸು ವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟ ಹೋಬಳಿ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ರೇಷ್ಮೇ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







