ಉಡುಪಿ: ಕಟ್ಟಡ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮನವಿ

ಉಡುಪಿ, ಜೂ.20: ಕಟ್ಟಡ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಸಂಘಟನೆಗಳು ಇಂದು ಶಾಸಕರು ಹಾಗೂ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಉಡುಪಿಯ ಮಣಿಪಾಲದಲ್ಲಿರುವ ಕಾರ್ಮಿಕ ಅಧಿಕಾರಿ ಕಚೇರಿಯ ಸಿಬ್ಬಂದಿ ಅಧಿಕಾರಿಯ ಅನುಪಸ್ಥಿತಿಯಲ್ಲಿ ಶಿವಪ್ರಸಾದ್ ಮನವಿ ಸ್ವೀಕರಿಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಮನವಿ ನೀಡಲಾಯಿತು. ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಅವರ ಸಹಾಯಕರ ಮೂಲಕ ಮನವಿ ನೀಡಲಾ ಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಅವರ ಸಹಾಯಕರು ಮೂಲಕ ಮನವಿ ಸಲ್ಲಿಸಿದರು.
ಬೇಡಿಕೆಗಳು: 2021-2022 ಸಾಲಿನಲ್ಲಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಬೇಕು. ಮನೆಕಟ್ಟಲು 5 ಲಕ್ಷ ಸಹಾಯಧನ ನೀಡಬೇಕು. ವೈದ್ಯಕೀಯ ವೆಚ್ಚ ಆರೋಗ್ಯ ಸಂಜೀವಿನಿ ಅಡಿಯಲ್ಲಿ ನೀಡಬೇಕು.ವೈದ್ಯಕೀಯ ವೆಚ್ಚ ಮಂಜೂರು ಮಾಡುವಾಗ ವಿಳಂಬ ಮಾಡಬಾರದು. ಪಿಂಚಣಿ, ನವೀಕರಣ ಅರ್ಜಿಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು.
ಕುಂದಾಪುರ, ಕಾರ್ಕಳ, ಉಡುಪಿ ವೃತ್ತ -2, ಬೈಂದೂರುಗಳಲ್ಲಿ ಖಾಲಿ ಇರುವ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಲ್ಯಾಣ ಮಂಡಳಿಯಲ್ಲಿ ಸಿಐಟಿಯು ಪ್ರಾತಿನಿಧ್ಯ ನೀಡಬೇಕು. ಸ್ಲಂ ಬೋರ್ಡ್‌ಗೆ ಮಂಡಳಿಯಿಂದ ನೀಡಿದ ಹಣ ಮರುಪಾವತಿ ಮಾಡಬೇಕು. ಈ ಹಿಂದಿನ ಸರಕಾರದ ಅವಧಿ ಯಲ್ಲಿ ನಡೆದ ಕಿಟ್ ಹಗರಣ ತನಿಖೆ ನಡೆಸಬೇಕು. ಕರೋನ ಸಂಕಷ್ಟ ಸಮಯ ದಲ್ಲಿ ತಿರಸ್ಕರಿಸಿದ ಅರ್ಜಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಫೆಡರೇಷನ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಹಾಗೂ ಉಡುಪಿ ಸಂಘದ ಜಿಲ್ಲಾ ಅಧ್ಯಕ್ಷ ಶೇಖರ ಬಂಗೇರ, ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಸಂಘಗಳ ಸಮನ್ವಯ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ, ಕುಂದಾಪುರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಉಪಾಧ್ಯಕ್ಷ ಚಂದ್ರಶೇಖರ ವಿ., ಉಡುಪಿ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ವಾಮನ ಪೂಜಾರಿ, ಬೈಂದೂರು ಸಂಘದ ಕೋಶಾಧಿಕಾರಿ ಹಾಗೂ ಸಮನ್ವಯ ಸಮಿತಿ ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಬೈಂದೂರು ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕೋಯನಗರ, ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.







