ಅಜ್ಜಿನಡ್ಕ: ಸರಕಾರಿ ಶಾಲೆಗೆ ನೆರವು

ಕೋಟೆಕಾರ್: ಅಜ್ಜಿನಡ್ಕದ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯನ್ನು ಐದು ವರ್ಷಗಳ ಮಟ್ಟಿಗೆ ದತ್ತು ಸ್ವೀಕರಿಸಿ ಶಾಲೆಗೆ ಬೇಕಾದ ಬೆಂಚು, ಡೆಸ್ಕ್, ಕುರ್ಚಿ, ಕಪಾಟು ಮತ್ತು ಶಾಲೆ ಎಲ್ಲಾ ಮಕ್ಕಳಿಗೆ ಬರೆಯುವ ಪುಸ್ತಕ, ಬ್ಯಾಗ್, ಕೊಡೆಯನ್ನು ವಿತರಿಸುವ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಕೋಟೆಕಾರು ವ್ಯವಸಾಯ ಬ್ಯಾಂಕ್‌ನ ಅಧ್ಯಕ್ಷ, ಕೊಂಡಾಣ ದೇವಸ್ಥಾನದ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಒದಗಿಸಿರುವ ಈ ಸೌಲಭ್ಯವನ್ನು ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ವಿದ್ಯಾರ್ಥಿಗಳಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಮುಂದೆ ಬರಬೇಕು. ಕೃಷ್ಣ ಶೆಟ್ಟಿ ಅವರ ಈ ಕಾರ್ಯ ಅಭಿನಂದನಾರ್ಹ. ರಕ್ಷಕರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯಲಿದ್ದಾರೆ ಎಂದರು.
ನೂತನ ಸ್ವೀಕರ್ ಯು.ಟಿ ಖಾದರ್, ದಾನಿ ಕೃಷ್ಣ ಶೆಟ್ಟಿಯವರನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಶಾಂತ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೀತಾ ಡಿ ಶೆಟ್ಟಿ, ಕೋಟೆಕಾರ್ ಪಪಂ ಸದಸ್ಯ ಇಸಾಕ್, ವೆಲ್ಫೇರ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಹನೀಫ್, ಸಾಮಾಜಿಕ ಕಾರ್ಯಕರ್ತ ಜಮಾಲ್ ಅಜ್ಜಿನಡ್ಕ, ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಾತಿಷ್ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಕೋಟೆಕಾರ್ ಪಪಂ ಸದಸ್ಯ ಅಹ್ಮದ್ ಅಜ್ಜಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ರಝಿಯಾ ಸ್ವಾಗತಿಸಿದರು.







