ಉಡುಪಿಯಲ್ಲೂ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲು ದ.ಸಂ.ಸ. ಒತ್ತಾಯ
ಉಡುಪಿ: ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿರುವುದನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸ್ವಾಗತಿಸುತ್ತದೆ.
ಹಲವಾರು ವರ್ಷಗಳಿಂದ ಕೋಮು ದಳ್ಳುರಿಯಿಂದ ನಲುಗಿರುವ ಮಂಗಳೂರಿನ ಜನತೆಗೆ ಸ್ವಲ್ಪವಾದರೂ ನಿಟ್ಟುಸಿರು ಬಿಡುವ ಅವಕಾಶ ಸಿಗಬಹುದು. ಕೋಮು ಧ್ವೇಷದ ಹಲವಾರು ಕೊಲೆಗಳು, ಪಬ್ ಮೇಲಿನ ದಾಳಿ , ಅನೈತಿಕ ಫೋಲೀಸ್ ಗಿರಿ, ಹಲಾಲ್ ಕಟ್, ವ್ಯಾಪಾರ ನಿಷೇಧ, ಹೀಗೆ ಹಲವಾರು ಕೋಮು ಗಲಭೆಗಳಿಂದ ದೇಶಾದ್ಯಂತ ಕುಖ್ಯಾತಿ ಪಡೆದಿರುವ ಮಂಗಳೂರಿಗೆ ಈ ಎಲ್ಲಾ ಅಕ್ರಮ, ಕಾನೂನುಭಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆ್ಯಂಟಿ ಕಮ್ಯುನಲ್ ವಿಂಗ್ ನ ಅವಶ್ಯಕತೆ ಇದೆ. ಉಡುಪಿ ಜಿಲ್ಲೆಯಲ್ಲಿಯೂ ಸಹ ಈ ಆ್ಯಂಟಿ ಕಮ್ಯುನಲ್ ವಿಂಗನ್ನು ಸ್ಥಾಪಿಸಬೇಕು ಎಂದು ದ.ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ನೆಮ್ಮದಿಯ ನೆಲೆವೀಡಾಗಿದ್ದ ನಮ್ಮ ಉಡುಪಿಯು ಈಗ ಬೆತ್ತಲೆ ಪ್ರಕರಣ , ಹಿಬಾಬ್ ಪ್ರಕರಣ , ವ್ಯಾಪಾರ ನಿಷೇಧ ಪ್ರಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೆ ಈಡಾಯಿತು. ಈ ಎಲ್ಲಾ ಕೋಮುವಾದಿ ಗೂಂಡಾಗಳನ್ನು ಮಟ್ಟಹಾಕಲು ಉಡುಪಿಯಲ್ಲೂ ಈ ಆ್ಯಂಟಿ ಕಮ್ಯೂನಲ್ ವಿಂಗ್ ಸ್ದಾಪನೆಯಾಗಲೇ ಬೇಕು. ಈ ವಿಂಗ್ ಬಗ್ಗೆ ಸಾರ್ವಜನಿಕರಾರೂ ಗಾಬರಿ ಭಯ ಗೊಂಡಂತೆ ಕಾಣುತ್ತಿಲ್ಲ. ಯಾಕಂದರೆ ಈ ವಿಂಗ್ ಕೇವಲ ಕಾನೂನು ಬಾಹಿರ ಚಟುವಟಿಕೆಗಳನ್ನಷ್ಟೇ ನಿಯಂತ್ರಿಸುತ್ತದೆ. ಆದರೆ ಕೆಲವೊಂದಷ್ಟು ಜನ ಈ ಆ್ಯಂಟಿ ಕಮ್ಯುನಲ್ ವಿಂಗ್ ಬಗ್ಗೆ ಭಯಗೊಳ್ಳುವುದು ನೋಡಿದರೆ ʼಕುಂಬಳ ಕಾಯಿ ಕಳ್ಳ ಯಾರು ಎಂದು ಕೇಳಿದರೆ ಹೆಗಲು ಮುಟ್ಟಿ ನೋಡಿಕೊಂಡನಂತೆʼ ಎಂಬ ಗಾದೆಯ ನೆನಪಾಗುತ್ತದೆ.
ಯಾವುದೇ ತಪ್ಪು ಮಾಡದ, ಕಾನೂನನ್ನು ಕೈಗೆ ತೆಗೆದುಕೊಳ್ಳದ, ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ಯಾವ ನಾಗರೀಕರೂ ಭಯ ಪಡುವ ಅಗತ್ಯ ಇಲ್ಲ ಎಂದು ಸುಂದರ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿಯ ಸಾರ್ವಜನಿಕರು ನೆಮ್ಮದಿಯಿಂದ ಸೌಹಾರ್ದತೆಯಿಂದ, ಸಹಬಾಳ್ವೆಯಿಂದ ಬದುಕಲು ಈ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ , ಶ್ಯಾಮಸುಂದರ್ ತೆಕ್ಕಟ್ಟೆ , ಮಂಜುನಾಥ್ ಬಾಳ್ಕುದ್ರು , ಅಣ್ಣಪ್ಪ ನಕ್ರೆ , ಗೋಪಾಲಕೃಷ್ಣ ಕುಂದಾಪುರ , ಶ್ರೀಧರ ಕುಂಜಿಬೆಟ್ಟು , ತಾಲೂಕು ಸಂಚಾಲಕರಾದ ಶ್ರೀ. ಶಂಕರ್ ದಾಸ್ ಚೆಂಡ್ಕಳ , ಶ್ರೀನಿವಾಸ ವಡ್ಡರ್ಸೇ , ನಾಗರಾಜ ಕುಂದಾಪುರ , ವಿಠಲ ಉಚ್ಚಿಲ , ರಾಘವ ಕುಕ್ಕುಜೆ, ದೇವು ಹೆಬ್ರಿ ಒತ್ತಾಯಿಸಿದ್ದಾರೆ.