ಕೇಂದ್ರದ ‘ದಿಲ್ಲಿ ಸುಗ್ರೀವಾಜ್ಞೆ’ಪ್ರತಿಪಕ್ಷಗಳ ಸಭೆಯ ಮುಖ್ಯ ಕಾರ್ಯಸೂಚಿಯಾಗಲಿದೆ: ಕೇಜ್ರಿವಾಲ್

ಹೊಸದಿಲ್ಲಿ: ದಿಲ್ಲಿಯ ಕುರಿತಾದ ಕೇಂದ್ರ ಸರಕಾರದ ಸುಗ್ರೀವಾಜ್ಞೆಯು ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯ ಮುಖ್ಯ ಕಾರ್ಯಸೂಚಿಯ ವಿಷಯವಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ತಿಳಿಸಿದ್ದಾರೆ. ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೇಜ್ರಿವಾಲ್ , ನಿತೀಶ್ ಸೇರಿದಂತೆ ವಿವಿಧ ಬಿಜೆಪಿಯೇತರ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಂತಹ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವುದರಿಂದ ಕೇಂದ್ರ ಸರಕಾರವು ಸಂವಿಧಾನದ ಸಾಮಾನ್ಯಪಟ್ಟಿಯಲ್ಲಿ ಪರಾಮರ್ಶೆಗೆ ಒಳಪಡುವ ಎಲ್ಲಾ ವಿಷಯಗಳು ನಿಷ್ಕ್ರಿಯಗೊಳ್ಳುವಂತೆ ಮಾಡುತ್ತದೆ ಎಂದರು.
ಸುಗ್ರೀವಾಜ್ಞೆಯ ಕುರಿತು ಕಾಂಗ್ರೆಸ್ ಪಕ್ಷವು ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ‘‘ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸುವುದೆಂದು ನಾನು ಭಾವಿಸುತ್ತೇನೆ. ಈ ಸಭೆಯಲ್ಲಿ ಇತರ ಎಲ್ಲಾ ರಾಜಕೀಯ ಪಕ್ಷಗಳ ಹಾಗೆ ತನ್ನ ನಿಲುವನ್ನು ತಿಳಿಸುವಂತೆ ಕಾಂಗ್ರೆಸನ್ನು ಕೇಳಲಾಗುವುದು ಎಂದರು.
ಕೇಂದ್ರ ಸರಕಾರಕ್ಕೆ ಸಂವಿಧಾನದ ಸಾಮಾನ್ಯಪಟ್ಟಿಯ ವ್ಯಾಪ್ತಿಯಲ್ಲಿರುವ ಯಾವುದೇ ವಿಷಯದ ಬಗ್ಗೆ ಇಂತಹದ್ದೇ ಸುಗ್ರೀವಾಜ್ಞೆಗಳನ್ನು ಹೊರಡಿಸುವ ಅಧಿಕಾರವಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ, ರಾಜ್ಯಗಳ ಸ್ವಾಯತ್ತೆಯ ರಕ್ಷಣೆಯನ್ನು ಖಾತರಿಪಡಿಸಬೇಕು’’ ಎಂದು ಕೇಜ್ರಿವಾಲ್ ಆಗ್ರಹಿಸಿದರು.
ದಿಲ್ಲಿಯ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಜಮೀನು ವಿಷಯಗಳನ್ನು ಹೊರತುಪಡಿಸಿ ಇತರ ಎಲ್ಲಾ ಸೇವೆಗಳ ಮೇಲಿನ ನಿಯಂತ್ರಣವನ್ನು ಚುನಾಯಿತ ಸರಕಾರಕ್ಕೆ ಸುಪ್ರೀಂಕೋರ್ಟ್ ಮೇ 11ರಂದು ಹಸ್ತಾಂತರಿಸಿ ಆದೇಶ ಹೊರಡಿಸಿತ್ತು. ಇದಾದ ಒಂದು ವಾರದ ಆನಂತರ ಕೇಂದ್ರ ಸರಕಾರ ಈ ಸುಗ್ರೀವಾಜ್ಞೆಯನ್ನು ಹೊರಡಿಸಿ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿತ್ತು. ಗ್ರೂಪ್ ಎ-ದರ್ಜೆಯ ನಾಗರಿಕ ಸೇವಾ ಅಧಿಕಾರಿಗಳ ವರ್ಗಾವಣೆ ಹಾಗೂ ಶಿಸ್ತುಕ್ರಮದ ವಿಷಯಗಳಿಗಾಗಿ ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವನ್ನು ಸ್ಥಾಪಿಸುವ ಆಶಯವನ್ನು ಸುಗ್ರೀವಾಜ್ಞೆ ಹೊಂದಿದೆ. ಆ ಮೂಲಕ ಅಧಿಕಾರಿ ವರ್ಗದ ಮೇಲಿನ ನಿಯಂತ್ರಣವನ್ನು ತನ್ನ ಬಳಿಯೇ ಇರಿಸಿಕೊಳ್ಳಲು ಕೇಂದ್ರ ಬಯಸಿದೆ.
ಈ ಸುಗ್ರೀವಾಜ್ಞೆಯ ವಿರುದ್ಧ ಬಿಜೆಪಿಯೇತರ ಪಕ್ಷಗಳ ಬೆಂಬಲ ಪಡೆಯಲು ಕೇಜ್ರಿವಾಲ್‌ತೀವ್ರ ಪಡೆಯುತ್ತಿದ್ದಾರೆ. ಸುಗ್ರೀವಾಜ್ಞೆಯ ಗರಿಷ್ಠ ಅವಧಿ, ಸುಮಾರು ಏಳೂವರೆ ತಿಂಗಳಾಗಿರುವುದರಿಂದ ಅದರ ಜಾಗದಲ್ಲಿ ವಿಧೇಯಕವನ್ನು ತಂದು, ಅದನ್ನು ಸಂಸತ್‌ನಲ್ಲಿ ಅಂಗೀಕಾರಗೊಳ್ಳುವಂತೆ ಮಾಡುವ ಕೇಂದ್ರದ ಪ್ರಯತ್ನವನ್ನು ವಿಫಲಗೊಳಿಸುವುದಕ್ಕಾಗಿ ಪ್ರತಿಪಕ್ಷಗಳ ಬೆಂಬಲ ಪಡೆಯಲು ಕೇಜ್ರಿವಾಲ್ ಶ್ರಮಿಸುತ್ತಿದ್ದಾರೆ.







