ಸಮಾನ ನಾಗರಿಕ ಸಂಹಿತೆ ಗೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಲಿ ವಿರೋಧ

ಹೊಸದಿಲ್ಲಿ: ಕೇಂದ್ರ ಸರಕಾರದ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಗೆ ಪ್ರಮುಖ ಮುಸ್ಲಿಮ್ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ‘‘ಸಮಾನ ನಾಗರಿಕ ಸಂಹಿತೆಯ ಕುರಿತು ಸಂಬಂಧಪಟ್ಟವರಿಂದ ಸಲಹೆಸೂಚನೆಗಳನ್ನು ಕೋರುವ ಕಾನೂನು ಆಯೋಗದ ನಡೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಹಾಗೂ ಎಲ್ಲಾ ಪೌರರು ಹೊಂದಿರುವ ಧಾರ್ಮಿಕ ಸ್ವಾತಂತ್ರಕ್ಕೆ ವ್ಯತಿರಿಕ್ತವಾದುದಾಗಿದೆ’’ ಎಂದವರು ಹೇಳಿದ್ದಾರೆ.
ಸಮಾನನಾಗರಿಕ ಸಂಹಿತೆ ಕುರಿತ ಕಾನೂನು ಆಯೋಗದ ಪ್ರಸ್ತಾವಕ್ಕೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (AIMPLB)ಯು ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ‘‘ ಇದೊಂದು ಕೋಮುಧ್ರುವೀಕರಣದ ಪ್ರಯತ್ನವಾಗಿದೆ ಹಾಗೂ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನವಾಗಿದೆ’’ ಎಂದು ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿ ಸಂಬಂಧಿತರಿಂದ ಸಲಹೆಸೂಚನೆಗಳನ್ನು ಆಹ್ವಾನಿಸುವ ಕೇಂದ್ರದ ನಡೆಯು ಅನಗತ್ಯವಾದುದಾಗಿದೆ ಹಾಗೂ ದೇಶಕ್ಕೆ ತೀರಾ ಅಪಾಯಕಾರಿ ಎಂದು ಎಐಎಂಪಿಎಲ್ಬಿ ವಕ್ತಾರ ಎಸ್.ಕ್ಯೂ.ಆರ್. ಇಲ್ಯಾಸ್ ತಿಳಿಸಿದ್ದಾರೆ. ಪ್ರಸ್ತಾವಿತ ಕಾನೂನಿನಿಂದಾಗಿ ಬುಡಕಟ್ಟು ಸಮುದಾಯಗಳ ಕಾನೂನುಗಳು ಹಾಗೂ ಸಂಪ್ರದಾಯಗಳು ಕೂಡಾ ಅಪಾಯಕ್ಕೆ ತುತ್ತಾಗಲಿವೆ’’ ಎಂದು ಇಲ್ಯಾಸ್ ತಿಳಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರವನ್ನು ಗೌರವಿಸುವಂತೆ ಹಾಗೂ ಅದನ್ನು ಶಾಸನದ ಮೂಲಕ ಮೊಟಕುಗೊಳಿಸದಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಕೇಂದ್ರ ಸರಕಾರವನ್ನು ಆಗ್ರಹಿಸಲಿದೆ ಎಂದರು.
ಪ್ರತ್ಯೇಕ ಬೆಳವಣಿಗೆಗಳಲ್ಲಿ ಪ್ರಮುಖ ಮುಸ್ಲಿಂ ಸಂಘಟನೆಗಳಾದ ಜಮೀಯತ್ ಉಲಾಮಾ ಇ ಹಿಂದ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿವೆ. ಸಮಾನ ನಾಗರಿಕ ಸಂಹಿತೆಯ ಅಪೇಕ್ಷಣೀಯತೆಯ ಬಗ್ಗೆ ನೂತನವಾಗಿ ಪರಾಮರ್ಶೆ ನಡೆಸುವಂತೆ ಆಗ್ರಹಿಸಿವೆ. ‘’ಸಮಾನನಾಗರಿಕ ಸಂಹಿತೆ ಕುರಿತ ಪ್ರಶ್ನಾವಳಿಯನ್ನು ಕೇಂದ್ರ ಕಾನೂನು ಆಯೋಗ ಪ್ರಕಟಿಸಿರುವುದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ದವಾದುದಾಗಿದೆ’’ ಎಂದಿವೆ.
‘ಕಾನೂನು ಆಯೋಗದ ಪ್ರಸ್ತಾವೆನೆ ಧಾರ್ಮಿಕ ಸ್ವಾತಂತ್ರಕ್ಕೆ ವಿರುದ್ಧವಾಗಿದೆ’
‘‘ ಇದು ಅಸ್ವೀಕಾರಾರ್ಹವಾದುದು ಹಾಗೂ ದೇಶದ ಸಮಗ್ರತೆಗೆ ಹಿನ್ನಡೆಯುಂಟು ಮಾಡುವಂತಹದ್ದಾಗಿದೆ’’ ಎಂದು ಜಮೀಯತ್ ಉಲೇಮಾ ಇ ಹಿಂದ್ ತಿಳಿಸಿದೆ. ಸಂವಿಧಾನದ 25 ಹಾಗೂ 26ನೇ ಕಲಮುಗಳಡಿ ನೀಡಲಾದ ಧಾರ್ಮಿಕ ಸ್ವಾತಂತ್ರ ಹಾಗೂ ಮೂಲಭೂತ ಹಕ್ಕುಗಳಿಗೆ ಈ ಪ್ರಸ್ತಾವನೆಯು ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಮದನಿ ತಿಳಿಸಿದ್ದಾರೆ.
ಕೇವಲ ಮುಸ್ಲಿಮರು ಮಾತ್ರವಲ್ಲ, ಸಿಖ್ಖರು, ಹಿಂದೂಗಳು ಅಥವಾ ಬುಡಕಟ್ಟು ಜನರು ಹೀಗೆ ಎಲ್ಲಾ ಸಮುದಾಯಗಳು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿವೆ. ಆದುದರಿಂದ ಸಮಾನ ನಾಗರಿಕಸಂಹಿತೆಯನ್ನು ಮುಸ್ಲಿಮ್ ಸಮುದಾಯಕ್ಕೆ ಮಾತ್ರವೇ ಸೀಮಿತವಾದುದು ಎಂಬ ದೃಷ್ಟಿಯಲ್ಲಿ ನೋಡಕೂಡದು.ನಮ್ಮ ಸಂವಿಧಾನವು ಪ್ರತಿಯೊಬ್ಬರಿಗೂ ನೀಡಿರುವ ಧಾರ್ಮಿಕ ಸ್ವಾತಂತ್ರದ ಹಕ್ಕಿಗೆ ಇದು ವಿರುದ್ಧವಾದುದಾಗಿದೆ. ಈ ಪ್ರಸ್ತಾವನೆಯ ಹಿಂದೆ ರಾಜಕೀಯ ದುರುದ್ದೇಶವಿದೆ. ಸರಕಾರದ ಇಂತಹ ನಡೆಗೆ ಕಾನೂನು ಆಯೋಗವು ಶರಣಾಗಿರುವುದು ದುರದೃಷ್ಟಕರ’’ ಎಂದು ಜಮಾತ್ನ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ‘ ದಿ ಹಿಂದೂ’ ಪತ್ರಿಕೆಗೆ ತಿಳಿಸಿದ್ದಾರೆ.
‘‘ಸುಮಾರು ಒಂದೂವರೆ ವರ್ಷದ ಹಿಂದೆ ಮುಸ್ಲಿಂ ಚಿಂತಕರ ನಿಯೋಗವೊಂದು ಜಮಾತೆ ಇಸ್ಲಾಮಿಯ ದಿವಂಗತ ಅಧ್ಯಕ್ಷ ಜಲಾಲುದ್ದೀನ್ ಉಮ್ರಿ ಅವರನ್ನು ಭೇಟಿಯಾಗಿ ಈ ವಿಷಯವಾಗಿ ಚರ್ಚಿಸಿತ್ತು. ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಅಪೇಕ್ಷೆ ಇಲ್ಲವೆಂದು ಆಯೋಗವು ಸ್ಪಷ್ಟವಾಗಿ ನಿಯೋಗಕ್ಕೆ ತಿಳಿಸಿದೆ. ಸಮಾನ ನಾಗರಿಕ ಸಂಹಿತೆಯು ಬಹುತ್ವವಾದಿ ದೇಶಕ್ಕೆ ಪ್ರಾಯೋಗಿಕವಲ್ಲ ಹಾಗೂ ಕಾರ್ಯಸಾಧ್ಯವಾದುದಲ್ಲವೆಂದು ಜಮಾತೆ ಇಸ್ಲಾಮಿ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ತಿಳಿಸಿದ್ದಾರೆ.







