ಕರಾಚಿ ಬಂದರು ನಿರ್ವಹಣೆ ಯುಎಇಗೆ ವಹಿಸಲು ಪಾಕ್ ನಿರ್ಧಾರ

ಇಸ್ಲಾಮಾಬಾದ್: ಐಎಂಎಫ್‌ನಿಂದ ಸಾಲ ಪಡೆಯುವ ಪ್ರಕ್ರಿಯೆ ವಿಳಂಬವಾಗಿರುವಂತೆಯೇ, ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ತನ್ನ ಕರಾಚಿ ಬಂದರು ಟರ್ಮಿನಲ್‌ನ ನಿರ್ವಹಣೆಯನ್ನು ಯುಎಇಗೆ ವಹಿಸಿಕೊಡುವ ಒಪ್ಪಂದವನ್ನು ಅಂತಿಮಗೊಳಿಸಲು ಸಮಾಲೋಚನಾ ಸಮಿತಿಯನ್ನು ರಚಿಸಿದೆ ಎಂದು ಮಂಗಳವಾರ ವರದಿಯಾಗಿದೆ.
ಸೋಮವಾರ ವಿತ್ತಸಚಿವ ಇಷಾಕ್ ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ್ ಸರಕಾರ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಸಂಪುಟ ಸಭೆಯಲ್ಲಿ ಕರಾಚಿ ಬಂದರು ಮಂಡಳಿ(ಕೆಪಿಟಿ) ಮತ್ತು ಯುಎಇ ಸರಕಾರದ ನಡುವೆ ವಾಣಿಜ್ಯ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಸಮಿತಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಕರಾಚಿ ಬಂದರು ಟರ್ಮಿನಲ್‌ಗಳನ್ನು ಹಸ್ತಾಂತರಿಸಲು ಸರಕಾರದಿಂದ ಸರಕಾರಕ್ಕೆ ವ್ಯವಸ್ಥೆಯಡಿ ಯುಎಇ ದೇಶದ ನಾಮನಿರ್ದೇಶಿತ ಏಜೆನ್ಸಿಯೊಂದಿಗೆ ಕರಡು ಕಾರ್ಯಾಚರಣೆ, ನಿರ್ವಹಣೆ, ಹೂಡಿಕೆ ಮತ್ತು ಅಭಿವೃದ್ಧಿ ಒಪ್ಪಂದವನ್ನು ಅಂತಿಮಗೊಳಿಸಲು ಸಮಾಲೋಚನಾ ಸಮಿತಿಗೆ ಅನುಮತಿ ನೀಡಲಾಗಿದೆ. ಸಾಗರ ವ್ಯವಹಾರ ಇಲಾಖೆಯ ಸಚಿವ ಫೈಸಲ್ ಸಬ್‌ಝವಾರಿ ಸಮಿತಿಯ ಮುಖ್ಯಸ್ಥರಾಗಿದ್ದು ವಿತ್ತ, ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಧಾನಿಯ ವಿಶೇಷ ಸಹಾಯಕ, ಕರಾಚಿ ಪೋರ್ಟ್ ಟರ್ಮಿನಲ್‌ನ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕರು ಸಮಿತಿಯ ಸದಸ್ಯರಾಗಿರುತ್ತಾರೆ.
‘ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಕಂಟೈನರ್ಸ್ ಟರ್ಮಿನಲ್ಸ್ (ಪಿಐಸಿಟಿ)ನ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕರಾಚಿ ಬಂದರು ಟರ್ಮಿನಲ್‌ನ ನಿರ್ವಹಣೆ ಪಡೆಯಲು ಯುಎಇ ಸರಕಾರ ಕಳೆದ ವರ್ಷವೇ ಆಸಕ್ತಿ ತೋರಿತ್ತು. ಇದೀಗ ಸಂಧಾನ ಸಮಿತಿಯನ್ನು ರಚಿಸಿರುವುದು ತುರ್ತು ನಿಧಿ ಸಂಗ್ರಹಣೆಗಾಗಿ ಕಳೆದ ವರ್ಷ ಜಾರಿಗೊಂಡಿರುವ ಕಾಯ್ದೆಯಡಿ ಪ್ರಥಮ ಅಂತರ್‌ಸರಕಾರ ವಹಿವಾಟಿಗೆ ಅನುವು ಮಾಡಿಕೊಡಲಿದೆ ಎಂದು ವರದಿ ಹೇಳಿದೆ.