ಹಿಂದೂ ಜಾಮೀನುದಾರರನ್ನು ಒದಗಿಸುವಂತೆ ಮುಸ್ಲಿಮ್ ಆರೋಪಿಗಳಿಗೆ ಪೊಲೀಸರ ಸೂಚನೆ: ವಕೀಲರ ಆರೋಪ
ಅಕೋಲಾ ಹಿಂಸಾಚಾರ

ಅಕೋಲಾ (ಮಹಾರಾಷ್ಟ್ರ): ಕಳೆದ ತಿಂಗಳು ಇಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಮುಸ್ಲಿಮ್ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಳ್ಳಬೇಕಿದ್ದರೆ ಹಿಂದೂ ಜಾಮೀನುದಾರರನ್ನು ತರುವಂತೆ ಅಕೋಲಾ ಪೊಲೀಸರು ಅವರಿಗೆ ಸೂಚಿಸಿದ್ದಾರೆ ಎಂದು ಆರೋಪಿಗಳ ಪರ ವಕೀಲರು ಮಂಗಳವಾರ ಆರೋಪಿಸಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಮೇ 13ರಂದು ಅಕೋಲಾದಲ್ಲಿ ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ ’ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಹಿಂದೂ ಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು,ಓರ್ವ ವ್ಯಕ್ತಿ ಮೃತಪಟ್ಟು,ಇತರ ಎಂಟು ಜನರು ಗಾಯಗೊಂಡಿದ್ದರು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 150 ಮುಸ್ಲಿಮ್ ಪುರುಷರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಕನಿಷ್ಠ 26 ಜನರನ್ನು ಪ್ರತಿನಿಧಿಸುತ್ತಿರುವ ವಕೀಲ ಎಂ.ಬದರ್ ಅವರು, ಸ್ಥಳೀಯ ಸೆಷನ್ಸ್ ನ್ಯಾಯಾಲಯವು ಪ್ರತಿ ವಾರ ಎರಡು ಗಂಟೆಗಳ ಕಾಲ ಕ್ರೈಂ ಬ್ರಾಂಚ್ ನಲ್ಲಿ ಹಾಜರಿರಬೇಕು ಎಂಬ ಷರತ್ತಿನೊಂದಿಗೆ ಸುಮಾರು ಶೇ.90ರಷ್ಟು ಆರೋಪಿಗಳಿಗೆ ಜಾಮೀನು ನೀಡಿತ್ತು.
ಆದರೆ ಆರೋಪಿಗಳು ಕ್ರೈಂ ಬ್ರಾಂಚ್ ಗೆ ಭೇಟಿ ನೀಡಿದಾಗ ಪ್ರತೀ ಆರೋಪಿ ವ್ಯಕ್ತಿಗೆ ಪ್ರತ್ಯೇಕ ಹಿಂದೂ ಜಾಮೀನುದಾರನನ್ನು ಒದಗಿಸುವಂತೆ ಪೊಲೀಸರು ಅವರಿಗೆ ವೌಖಿಕವಾಗಿ ಸೂಚಿಸಿದ್ದಾರೆ ಎಂದು ತಿಳಿಸಿದರು. ಇದಕ್ಕೆ ತಪ್ಪಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಗಳನ್ನು ಮರುಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ಎಂದೂ ತಿಳಿಸಿದ ಅವರು, ಇದು ಅಸಾಂವಿಧಾನಿಕವಾಗಿದೆ ಎಂದು ನಾವು ಸ್ಥಳೀಯ ಕ್ರೈಂ ಬ್ರಾಂಚ್ ಮತ್ತು ಎಸ್ಪಿಗೆ ಲಿಖಿತವಾಗಿ ತಿಳಿಸಿದ್ದೇವೆ ಎಂದರು.
ಈ ಷರತ್ತಿನ ಕುರಿತು ಲಿಖಿತವಾಗಿ ತಿಳಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಹಿಂದು ಜಾಮೀನುದಾರರನ್ನು ಕರೆತರುವಂತೆ ಮುಸ್ಲಿಮ್ ಆರೋಪಿಗಳಿಗೆ ಕಿರುಕುಳವನ್ನು ಮುಂದುವರಿಸಿದ್ದಾರೆ. ಇವರೆಲ್ಲ ಬಡವರಾಗಿದ್ದಾರೆ. ಪೊಲೀಸರ ನಡೆ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ ಎಂದು ಬದರ್ ಹೇಳಿದರು.
ಹಿಂದೂ ಜಾಮೀನುದಾರರನ್ನು ಒದಗಿಸುವಂತೆ ಮುಸ್ಲಿಮ್ ಆರೋಪಿಗಳಿಗೆ ಕಡ್ಡಾಯಗೊಳಿಸಲಾಗಿಲ್ಲ. ಇದು ವದಂತಿಯಾಗಿದೆ.ಆರೋಪಿಗಳ ಆರ್ಥಿಕ ಸ್ಥಿತಿಯ ಆಧಾರದಲ್ಲಿ ಅಧಿಕಾರಿಗಳು ಭದ್ರತೆಯನ್ನು ಕೇಳುತ್ತಿದ್ದಾರೆ ಎಂದು ಅಕೋಲಾ ಎಸ್ಪಿ ಸಂದೀಪ್ ರಘುಗೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.







