ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್: ಜೀವನಶ್ರೇಷ್ಠ ಸಾಧನೆ ಮಾಡಿದ ಚಿರಾಗ್-ಸಾತ್ವಿಕ್

ಹೊಸದಿಲ್ಲಿ: ಭಾರತದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ತಂಡದ ಸದಸ್ಯರಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂಡೋನೇಶ್ಯ ಓಪನ್‌ನಲ್ಲಿ ಮೊತ್ತ ಮೊದಲ ಬಾರಿ ಸೂಪರ್-1000 ಪ್ರಶಸ್ತಿಯನ್ನು ಜಯಿಸಿದ ಹಿನ್ನೆಲೆಯಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಭಾರತದ ಸಾತ್ವಿಕ್-ಚಿರಾಗ್ ಹಾಲಿ ವಿಶ್ವ ಚಾಂಪಿಯನ್‌ಗಳಾದ ಆ್ಯರೊನ್ ಚಿಯಾ ಹಾಗೂ ಸೊಯ್ ವೂ ಕಿ ಅವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಸೂಪರ್-1000 ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮೂರು ಸ್ಥಾನ ಮೇಲಕ್ಕೇರಿ ವಿಶ್ವದ ನಂ.19ನೇ ಸ್ಥಾನ ತಲುಪಿ ಅಗ್ರ-20ಕ್ಕೆ ತಲುಪಿದ್ದಾರೆ. ಎರಡು ಸ್ಥಾನ ಭಡ್ತಿ ಪಡೆದಿರುವ ಲಕ್ಷ್ಯ ಸೇನ್ ವಿಶ್ವದ ನಂ.18ನೇ ಸ್ಥಾನ ಪಡೆದಿದ್ದಾರೆ.
ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಸೋತಿರುವ ಎಚ್.ಎಸ್.ಪ್ರಣಯ್ ವಿಶ್ವ ರ್ಯಾಂಕಿಂಗ್‌ನಲ್ಲಿ 9ನೇ ಸ್ಥಾನ ಉಳಿಸಿಕೊಂಡು ಭಾರತದ ಪುರುಷರ ಸಿಂಗಲ್ಸ್‌ನಲ್ಲಿ ಗರಿಷ್ಠ ರ‍್ಯಾಂಕಿಂಗ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಭಾರತದ ಉದಯೋನ್ಮುಖ ಶಟ್ಲರ್ ಪ್ರಿಯಾಂಶು ರಾಜಾವತ್ ವಿಶ್ವದ ನಂ.30ಕ್ಕೆ ತಲುಪುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಹಿನ್ನಡೆಯಿಂದ ಪಾರಾಗಿದ್ದು, ಈ ಬಾರಿ ಎರಡು ಸ್ಥಾನ ಭಡ್ತಿ ಪಡೆದು 12ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್ 1 ಸ್ಥಾನ ಭಡ್ತಿ ಪಡೆದು 31ನೇ ರ‍್ಯಾಂಕಿಂಗ್ ತಲುಪಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ರ್ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಪಡೆದಿದ್ದಾರೆ. ಅಶ್ವಿನಿ ಭಟ್ ಹಾಗೂ ಶಿಖಾ ಗೌತಮ್ ಎರಡು ಸ್ಥಾನ ಕೆಳ ಜಾರಿ 41ನೇ ರ‍್ಯಾಂಕಿಗೆ ತಲುಪಿದ್ದಾರೆ.







