ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಉನ್ನತ ಸರಕಾರಿ ಅಧಿಕಾರಿಗಳು: ಮ.ಪ್ರ ಬಿಜೆಪಿ-ಕಾಂಗ್ರೆಸ್ ನಡುವೆ ಭುಗಿಲೆದ್ದ ವಾಕ್ಸಮರ

ಭೋಪಾಲ್: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಆರೆಸ್ಸೆಸ್ ನ ಕಾರ್ಯಕ್ರಮವೊಂದರಲ್ಲಿ ಕೆಲವು ಸರಕಾರಿ ಅಧಿಕಾರಿಗಳು ಭಾಗವಹಿಸಿದ್ದನ್ನು ತೋರಿಸುವ ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಆನಂತರ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರ ಭುಗಿಲೆದ್ದಿದೆ.
ಇಂತಹ ಅಧಿಕಾರಿಗಳನ್ನು ಈ ವರ್ಷಾಂತ್ಯದಲ್ಲಿ ನಡೆಯುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸಿದ್ಧತಾ ಚಟುವಟಿಕೆಗಳಿಂದ ದೂರವಿರಿಸಬೇಕೆಂದು ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ವಿವೇಕ್ ತಂಕಾ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯು, ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ ರುವ ದ್ವೇಷಕ್ಕೆ ಇದೊಂದು ಸೂಕ್ತ ನಿದರ್ಶನವಾಗಿದೆ ಎಂದರು.
ಸತ್ನಾ ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಹಾಗೂ ಸತ್ನಾ ನಗರಪಾಲಿಕೆಯ ಆಯುಕ್ತ ರಾಜೇಶ್ ಶಾಹಿ ಅವರು ಜೂನ್ 11ರಂದು ಆರೆಸ್ಸೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆಂದು ಕಾಂಗ್ರೆಸ್ ನ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಕೆ.ಮಿಶ್ರಾ ತಿಳಿಸಿದ್ದಾರೆ.
‘‘ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ನಿಷ್ಪಕ್ಷಪಾತವಾಗಿ ಕರ್ತವ್ಯನಿರ್ವಹಿಸುವುದನ್ನು ಇಂತಹ ಅಧಿಕಾರಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ನಡವಳಿಕೆಯು ನಾಗರಿಕ ಅಧಿಕಾರಿಗಳಿಗೆ ತಕ್ಕುದಾಗಿಲ್ಲವೆಂದು’’ ಮಿಶ್ರಾ ಹೇಳಿದ್ದಾರೆ. ಈ ಅಧಿಕಾರಿಗಳ ವರ್ತನೆಯ ಬಗ್ಗೆ ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
ಆದರೆ ಅಧಿಕಾರಿಗಳು ಯಾವುದೇ ರೀತಿಯ ನೀತಿಸಂಹಿತೆಯನ್ನು ಉಲ್ಲಂಘಿಸಿಲ್ಲವೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ರಜನೀಶ್ ಅಗರವಾಲ್ ತಿಳಿಸಿದ್ದಾರೆ.
‘‘ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಾನೂನುಬಾಹಿರವಲ್ಲ ಅಥವಾ ಅಸಾಂವಿಧಾನಿಕವಲ್ಲ. ಅಲ್ಲದೆ ನಾಗರಿಕ ಅಧಿಕಾರಿಗಳ ನೀತಿ ಸಂಹಿತೆಯನ್ನು ಅದು ಉಲ್ಲಂಘಿಸಿಲ್ಲ. ಸಾಂವಿಧಾನಿಕ ವ್ಯವಸ್ಥೆಯಡಿ ಆರೆಸ್ಸೆಸ್ ಕಾರ್ಯನಿರ್ವಹಿಸುತ್ತಿದೆ. ಅದೊಂದು ಪ್ರಜಾತಾಂತ್ರಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿದೆ. ಒಂದು ವೇಳೆ ಕಾಂಗ್ರೆಸ್ ಯಾವುದೇ ಸಂಘಟನೆಯನ್ನು ದ್ವೇಷದಿಂದ ನೋಡುತ್ತಿದೆಯಾದರೆ, ಅದರ ತಪ್ಪೇ ಹೊರತು ಅಧಿಕಾರಿಗಳ ತಪ್ಪಲ್ಲ’’ ಎಂದು ಅಗರ್ವಾಲ್ ತಿಳಿಸಿದ್ದಾರೆ.







