ಏಶ್ಯನ್ ಚಾಂಪಿಯನ್ಸ್; ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಚೀನಾ ಎದುರಾಳಿ
ಹೊಸದಿಲ್ಲಿ: ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಮ್‌ನಲ್ಲಿ ನಡೆಯುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿ-2023ರಲ್ಲಿ ಆಗಸ್ಟ್ 3ರಂದು ಚೀನಾ ತಂಡವನ್ನು ಎದುರಿಸುವ ಮೂಲಕ ಭಾರತವು ತನ್ನ ಅಭಿಯಾನ ಆರಂಭಿಸಲಿದೆ.
ಹಾಲಿ ಚಾಂಪಿಯನ್ ಕೊರಿಯಾ ತಂಡ ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಟೂರ್ನಮೆಂಟ್ ಆಗಸ್ಟ್ 3ರಂದು ಆರಂಭವಾಗಿ ಆಗಸ್ಟ್ 12ರ ತನಕ ನಡೆಯಲಿದೆ.
ಆರು ತಂಡಗಳ ಟೂರ್ನಮೆಂಟ್‌ನಲ್ಲಿ ಕೊರಿಯಾ, ಮಲೇಶ್ಯ, ಪಾಕಿಸ್ತಾನ, ಜಪಾನ್, ಚೀನಾ ಹಾಗೂ ಭಾರತವು ಅಗ್ರ ಸ್ಥಾನಕ್ಕಾಗಿ ಹೋರಾಟ ನಡೆಸಲಿವೆ. ಎಲ್ಲ ತಂಡಗಳು ಒಂದೇ ಗುಂಪಿನಲ್ಲಿದ್ದು, ಲೀಗ್ ಪದ್ಧತಿಯ ಮೂಲಕ ಅಂಕಪಟ್ಟಿಯ ಸ್ಥಾನಮಾನವನ್ನು ನಿರ್ಧರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ, ‘‘ಚೆನ್ನೈನಲ್ಲಿ 2023ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ’’ ಎಂದರು.
ಭಾರತ (2011, 2016, 2018) ಹಾಗೂ ಪಾಕಿಸ್ತಾನ (2012, 2013, 2018)ತಲಾ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಟೂರ್ನಮೆಂಟ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಹಾಗೂ ಪಾಕಿಸ್ತಾನ ಆಗಸ್ಟ್ 9ರಂದು ಮುಖಾಮುಖಿ ಯಾಗಲಿವೆ.







