ಭಾರತ- ಅಮೆರಿಕ ನಡುವಿನ ಬಾಂಧವ್ಯ ಹಿಂದೆಂದಿಗಿಂತಲೂ ಬಲಿಷ್ಠ, ಗಾಢ
ಅಮೆರಿಕ ಪ್ರವಾಸಕ್ಕೆ ಮುನ್ನ ‘‘ವಾಲ್ ಸ್ಟ್ರೀಟ್ ಜರ್ನಲ್’ ಗೆ ನೀಡಿದ ಸಂದರ್ಶನದಲ್ಲಿ ಮೋದಿ

ಹೊಸದಿಲ್ಲಿ: ಭಾರತ ಮತ್ತು ಅಮೆರಿಕಗಳ ನಡುವಿನ ಬಾಂಧವ್ಯ ಹಿಂದೆಂದಿಗಿಂತಲೂ ಬಲಿಷ್ಠ ಮತ್ತು ಗಾಢವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಈ ಎರಡು ದೇಶಗಳ ನಾಯಕರ ನಡುವೆ ‘‘ಅಭೂತಪೂರ್ವ’’ ನಂಬಿಕೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಭಾರತ ಹೆಚ್ಚಿನ, ಗಾಢ ಮತ್ತು ವಿಶಾಲ ಪಾತ್ರಕ್ಕೆ ಅರ್ಹವಾಗಿದೆ’’ ಎಂದು ಅಮೆರಿಕ ಪ್ರವಾಸ ಕೈಗೊಳ್ಳುವ ಮುನ್ನ ‘ವಾಲ್ಸ್ಟ್ರೀಟ್ ಜರ್ನಲ್’ಗೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ಹೇಳಿದ್ದಾರೆ.
‘‘ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದರಲ್ಲಿ ಹಾಗೂ ಕಾನೂನಿನ ಆಡಳಿತವನ್ನು ಖಾತರಿಪಡಿಸುವಲ್ಲಿ ಮತ್ತು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಅದೇ ವೇಳೆ, ತನ್ನ ಸಾರ್ವಭೌಮತೆ ಮತ್ತು ಘನತೆಯನ್ನು ಕಾಪಾಡಿಕೊಂಡು ಬರುವಲ್ಲಿ ಭಾರತವು ಸಂಪೂರ್ಣ ಸಿದ್ಧ ಮತ್ತು ಬದ್ಧವಾಗಿದೆ’’ ಎಂದು ಅಮೆರಿಕದ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಂಗಳವಾರ ಅಮೆರಿಕದ ತನ್ನ ಮೊದಲ ಸರಕಾರಿ ಪ್ರವಾಸಕ್ಕಾಗಿ ವಿಮಾನ ಏರಿದ್ದಾರೆ. ಪ್ರಧಾನಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅಮೆರಿಕಕ್ಕೆ ಆಹ್ವಾನಿಸಿದ್ದಾರೆ.
ಪ್ರಧಾನಿ ಮೋದಿಯ ಪ್ರವಾಸ ನ್ಯೂಯಾರ್ಕ್ನಲ್ಲಿ ಆರಂಭಗೊಳ್ಳುತ್ತದೆ. ಜೂನ್ 21ರಂದು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಭಾಗವಹಿಸಲಿದ್ದಾರೆ.
‘‘ನಾನು ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿಯಾಗಿದ್ದೇನೆ. ಹಾಗಾಗಿ, ನನ್ನ ಯೋಚನೆ, ನಡತೆ, ನಾನು ಏನು ಹೇಳುತ್ತೇನೆ ಮತ್ತು ಮಾಡುತ್ತೇನೆ- ಇವುಗಳು ನನ್ನ ದೇಶದ ಗುಣಗಳು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ. ನಾನು ನನ್ನ ಶಕ್ತಿಯನ್ನು ಅದರಿಂದ ಪಡೆಯುತ್ತೇನೆ. ನಾನು ನನ್ನ ದೇಶವನ್ನು ಅದು ಹೇಗಿದೆಯೋ ಹಾಗೆಯೇ ಜಗತ್ತಿನ ಮುಂದಿಡುತ್ತೇನೆ’’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.







