ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಆಸ್ಟ್ರೇಲಿಯ; ಉಸ್ಮಾನ್ ಖ್ವಾಜಾ ಆಸರೆ
ಬರ್ಮಿಂಗ್‌ಹ್ಯಾಮ್: ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಅವರ ಏಕಾಂಗಿ ಹೋರಾಟದ ಬಲದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.
5ನೇ ದಿನವಾದ ಮಂಗಳವಾರ ಗೆಲ್ಲಲು 281 ರನ್ ಗುರಿ ಬೆನ್ನಟ್ಟುತ್ತಿರುವ ಆಸ್ಟ್ರೇಲಿಯ ಟೀ ವಿರಾಮದ ವೇಳೆಗೆ 59 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿದೆ. ಗೆಲ್ಲಲು 5 ವಿಕೆಟ್ ನೆರವಿನಿಂದ ಇನ್ನೂ 98 ರನ್ ಗಳಿಸಬೇಕಾಗಿದೆ.
ಮೊದಲ ಇನಿಂಗ್ಸ್‌ನಲ್ಲಿ ಶತಕ(141 ರನ್)ಗಳಿಸಿ ತಂಡವನ್ನು ಆಧರಿಸಿದ್ದ ಖ್ವಾಜಾ ಎರಡನೇ ಇನಿಂಗ್ಸ್‌ನಲ್ಲೂ ತಂಡವನ್ನು ಆಧರಿಸಿದರು. ಖ್ವಾಜಾ ಔಟಾಗದೆ 56 ರನ್(159 ಎಸೆತ)ಗಳಿಸಿದ್ದು, ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್(ಔಟಾಗದೆ 22 ರನ್)ಜೊತೆಗೂಡಿ ತನ್ನ ಹೋರಾಟವನ್ನು ಮುಂದುವರಿಸಿದ್ದಾರೆ. ಖ್ವಾಜಾ ಹಾಗೂ ಗ್ರೀನ್ 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 40 ರನ್ ಗಳಿಸಿದರು.
ಡೇವಿಡ್ ವಾರ್ನರ್‌ರೊಂದಿಗೆ ಮೊದಲ ವಿಕೆಟ್‌ನಲ್ಲಿ 61 ರನ್ ಸೇರಿಸಿದ ಖ್ವಾಜಾ ಉತ್ತಮ ಆರಂಭ ನೀಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ರ್ಯಾಂಕಿನ ಆಟಗಾರರಾದ ಲ್ಯಾಬುಶೇನ್(13 ರನ್) ಹಾಗೂ ಸ್ಟೀವನ್ ಸ್ಮಿತ್(6 ರನ್)ವಿಕೆಟನ್ನು ಕಬಳಿಸಿದ ವೇಗಿ ಸ್ಟುವರ್ಟ್ ಬ್ರಾಡ್(3-42)ಆಸೀಸ್‌ಗೆ ಆಘಾತ ನೀಡಿದರು. ಸ್ಕಾಟ್ ಬೋಲ್ಯಾಂಡ್(20 ರನ್), ಟ್ರಾವಿಡ್ ಹೆಡ್(16 ರನ್)ವಿಫಲರಾದರು.





