ಗೃಹ ಜ್ಯೋತಿ: 3 ದಿನಗಳಲ್ಲಿ 8,16,631 ಗ್ರಾಹಕರ ನೋಂದಣಿ

ಬೆಂಗಳೂರು, ಜೂ.20: ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಿರುಸಿನಿಂದ ಸಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು 8,16,631 ಗ್ರಾಹಕರು ಯೋಜನೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಮಂಗಳವಾರ ಸಂಜೆ ವೇಳೆಗೆ ಒಟ್ಟು 8,16,631 ಮುಟ್ಟಿದ್ದು, ಕಳೆದ ಎರಡು ದಿನಗಳಿಗೆ ಹೋಲಿಸಿದರೆ, ನೋಂದಣಿ ಸಂಖ್ಯೆ ಮೂರು ಪಟ್ಟು ಹೆಚ್ಚಳಗೊಂಡಿದೆ. 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರು ಭಾರೀ ಉತ್ಸುಕತೆ ತೋರುತ್ತಿದ್ದಾರೆ.
ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅದೇ ರೀತಿ ಕೆಲವು ವಿದ್ಯುತ್ ಕಚೇರಿಗಳಲ್ಲಿ ಗ್ರಾಹಕರು ಯೋಜನೆಗೆ ನೋಂದಣಿಗೊಂಡಿದ್ದಾರೆ.
ಮೊದಲ ದಿನ 96,305 ಮಂದಿ ಗ್ರಾಹಕರು ನೋಂದಣಿ ಮಾಡಿದ್ದರು. ಎರಡನೆಯ ದಿನ ನೋಂದಣಿ ಸಂಖ್ಯೆ 3,34,845 ಗೆ ಏರಿಕೆ ಆಗಿದ್ದರೆ, ಮೂರನೇ ದಿನ ಈ ಸಂಖ್ಯೆ 3,85,481 ಗೆ ತಲುಪಿದೆ. ಒಟ್ಟು 8,16,631 ಮಂದಿ ಯೋಜನೆಗೆ ನೋಂದಣಿ ಮಾಡಿದ್ದಾರೆ.
ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆಗೆ ಕಳೆದ ರವಿವಾರ (ಜೂನ್ 18) ರಂದು ಅಧಿಕೃತವಾಗಿ ಚಾಲನೆ ನೀಡಲಾಗಿತ್ತು.







