ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ನೀವೇ ಹೊಣೆ: ಎಸ್ಪಿ ವಿರುದ್ಧ ಡಿವೈಎಸ್‌ಪಿ ಪತ್ರ
ಸಾಮಾಜಿಕ ಜಾಲತಾಣದಲ್ಲಿ ಪತ್ರ ವೈರಲ್

ಬಳ್ಳಾರಿ: ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿರುದ್ಧ ಡಿವೈಎಸ್‌ಪಿ ದೂರು ಸಲ್ಲಿಕೆ ಮಾಡಿರುವ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂಡೂರು ಡಿವೈಎಸ್‌ಪಿ ಎಸ್.ಎಸ್. ಕಾಶಿ ಅವರು ವೈಯಕ್ತಿಕ ಕಾರಣಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಅವರ ಬಳಿ ಒಂದು ತಿಂಗಳು ರಜೆಗಾಗಿ ಮನವಿ ಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ, ಧ್ಯಾನ, ಯೋಗ, ಪ್ರಾರ್ಥನೆ ಮಾಡಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಒಂದು ತಿಂಗಳು ವೈಯಕ್ತಿಕ ರಜೆ ನೀಡಬೇಕೆಂದು ಅವರು ಕೋರಿದ್ದರು. ಆದರೆ, ಬಳ್ಳಾರಿ ಎಸ್ಪಿ 5 ದಿನಗಳ ಕಾಲ ಮಾತ್ರ ರಜೆ ಮಂಜೂರು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಎಸ್ಪಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿರುವ ಡಿವೈಎಸ್‌ಪಿ, ''ಸದ್ಯ ನಾನು ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗ, ಧ್ಯಾನ ಹಾಗೂ ಪ್ರಾರ್ಥನೆಯ ಅವಶ್ಯಕತೆ ಇರುವುದರಿಂದ 30 ದಿನಗಳ ರಜೆಗೆ ಮನವಿ ಮಾಡಿದ್ದೆ. ಒಂದು ವೇಳೆ ತಾವು ರಜೆ ಮಂಜೂರು ಮಾಡದಿದ್ದ ಪಕ್ಷದಲ್ಲಿ ಐದು ದಿನಗಳಲ್ಲಿ ವಾಪಸ್ ಬಂದು ಕೆಲಸಕ್ಕೆ ಹಾಜರಾದರೆ ಸಂಭವಿಸುವ ಅಚಾತುರ್ಯಗಳಿಗೆ ನೀವೇ ಹೊಣೆಗಾರರು'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೇ,''ಉದ್ದೇಶಪೂರ್ವಕವಾಗಿ ನೀವು ನನ್ನ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳದೆ ನಿರ್ಲಕ್ಷ್ಯ ತೋರಿದ್ದೀರಿ ಎಂದೆನಿಸುತ್ತಿದೆ. ನಿಮ್ಮ ಆಡಳಿತವು ತಾರತಮ್ಯ, ಸುಳ್ಳು, ಮೋಸಗಳಿಂದ ಕೂಡಿದ್ದು, ಇದರಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ'' ಎಂದೆಲ್ಲಾ ಪತ್ರದಲ್ಲಿ ಹೇಳಿದ್ದಾರೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.







