ಜಂಬೋ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದ ಹಗರಣ: ಮುಂಬೈನಲ್ಲಿ ಈಡಿ ದಾಳಿ

ಮುಂಬೈ: ಉದ್ಯಮಿ ಸುಜಿತ್ ಪಾಟ್ಕರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈನ 15 ಸ್ಥಳಗಳಲ್ಲಿ ಬುಧವಾರ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್-19 ಆಸ್ಪತ್ರೆಗಳನ್ನು ನಿರ್ವಹಿಸುವುದಕ್ಕಾಗಿ ಪಾಟ್ಕರ್ ಮತ್ತು ಅವರ ಮೂವರು ಪಾಲುದಾರರು ಮುಂಬೈ ಮಹಾನಗರ ಪಾಲಿಕೆಯಿಂದ ಗುತ್ತಿಗೆಗಳನ್ನು ಮೋಸದಿಂದ ಪಡೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್-19 ಆಸ್ಪತ್ರೆ ನಿರ್ವಹಣಾ ಒಪ್ಪಂದಗಳಿಗೆ ಸಂಬಂಧಿಸಿದಂತೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹಾಗೂ ಐಎಎಸ್ ಅಧಿಕಾರಿ ಸಂಜೀವ್ ಜೈಸ್ವಾಲ್ ಸೇರಿದಂತೆ ಇತರರ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಮುಂಬೈನ ಆಝಾದ್ ಮೈದಾನ ಪೊಲೀಸ್ ಠಾಣೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ಲೈಫ್‌ಲೈನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಸಂಸ್ಥೆ ಪಾಟ್ಕರ್ ಹಾಗೂ ಅವರ ಮೂವರು ಪಾಲುದಾರರ ವಿರುದ್ಧ ಫೋರ್ಜರಿ ಪ್ರಕರಣವನ್ನು ದಾಖಲಿಸಿದೆ.
ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ(ಈಡಿ) ಅಕ್ರಮ ಹಣ ವರ್ಗಾವಣೆ ದೃಷ್ಟಿಕೋನದಲ್ಲಿ ತನಿಖೆಗಾಗಿ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.





