ಜಲಾಂತರ್ಗಾಮಿ 'ಟೈಟನ್' ನಾಪತ್ತೆಯಾದ ಸ್ಥಳದಲ್ಲಿ 'ಬಡಿಯುವ ಶಬ್ಧ' !

ಲಂಡನ್: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ತೆರಳಿ ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆ “ಟೈಟನ್” ನಲ್ಲಿರುವವರು ಜೀವಂತವಾಗಿರಬಹುದೆಂದು ಕುರುಹುಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ತಂಡಗಳಿಗೆ ಸಿಲುಕಿದೆ.
ಈ ಜಲಾಂತರ್ಗಾಮಿ ಹಡಗಿನಲ್ಲಿ ಐದು ಜನರಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಹಡಗಿನಲ್ಲಿರುವವರಿಗೆ ಪ್ರತಿ 30 ನಿಮಿಷಗಳಿಗೊಮ್ಮೆ “ಬಡಿಯುವ ಸದ್ದು” ಕೇಳಿಸುತ್ತಿದೆ ಎಂದು ತಿಳಿದು ಬಂದಿದೆ.
ಈ ಆರ್ಕಾ ಗಾತ್ರದ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆಹಚ್ಚಲು ಅಮೆರಿಕಾದ ಕೋಸ್ಟ್ ಗಾರ್ಡ್, ಕೆನಡಾದ ಜಂಟಿ ರಕ್ಷಣಾ ಕೇಂದ್ರದ ತಂಡ ಹಾಗೂ ಫ್ರಾನ್ಸಿನಿಂದ ಹಡಗುಗಳು ಆಗಮಿಸಿವೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಕ್ಸ್‌ಪ್ಲೋರರ್ಸ್ ಕ್ಲಬ್ ನೀಡಿದ ಮಾಹಿತಿಯಂತೆ ನೀರಿನೊಳಗಿನಿಂದ ಬಡಿಯುವ ಸದ್ದು, ಈ ಜಲಾಂತರ್ಗಾಮಿ ಎರಡು ದಿನಗಳ ಹಿಂದೆ ನಾಪತ್ತೆಯಾದ ಸ್ಥಳದ ಸಮೀಪದಿಂದ ಕೇಳಿಸುತ್ತಿದೆ.
ಈ ಜಲಾಂತರ್ಗಾಮಿಯಲ್ಲಿದ್ದ ಐದು ಮಂದಿಯ ಬಳಿ ಇರುವ ಆಮ್ಲಜನಕ 24 ಗಂಟೆಗೂ ಕಡಿಮೆ ಅವಧಿಗೆ ಸಾಕಾಗಬಹುದು ಎಂದು ಅಮೆರಿಕಾದ ಕೋಸ್ಟ್ ಗಾರ್ಡ್ ಹೇಳಿದೆ. ಟೈಟನ್ ಎಂಬ ಈ ಜಲಾಂತರ್ಗಾಮಿ ತುರ್ತು ಸಂದರ್ಭದಲ್ಲಿ 96 ಗಂಟೆಗಳ ತನಕ ಸಾಕಾಗುವ ಆಮ್ಲಜನಕ ಹೊಂದಲು ವಿನ್ಯಾಸಗೊಳಿಸಲಾಗಿದೆ. ಈ ಮಿಷನ್ ನಡೆಸುತ್ತಿದ್ದ ಓಶಿಯನ್‌ಗೇಟ್ ಎಕ್ಸ್‌ಪೆಡಿಶನ್ಸ್ ಈ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದೆ ಹಾಗೂ ಅದನ್ನು ಮುನ್ನಡೆಸುತ್ತಿದೆ.
ಕಾರ್ಬನ್ ಫೈಬರ್ ಮತ್ತು ಟೈಟಾನಿಯಂನಿಂದ ನಿರ್ಮಿತ ಈ 6.7 ಮೀಟರ್ ಉದ್ದದ ಜಲಾಂತರ್ಗಾಮಿಯನ್ನು ಪತ್ತೆಹಚ್ಚಲು ವೈಮಾನಿಕ ಶೋಧಗಳು ವಿಫಲವಾಗಿವೆ ಎಂದು ತಿಳಿದು ಬಂದಿದೆ.
ರಕ್ಷಣಾ ತಂಡಗಳು ಪ್ರತಿಕೂಲ ಹವಾಮಾನದ ಹೊರತಾಗಿಯೂ ಉತ್ತರ ಅಟ್ಲಾಂಟಿಕ್ ಸಾಗರದ 20,000 ಚದರ ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
“ಅಲ್ಲಿ ಕರ್ಗತ್ತಲು ತುಂಬಿದೆ, ಥರಗಟ್ಟುವ ಚಳಿಯಿದೆ. ಮುಖದ ಎದುರು ಹಿಡಿದ ಕೈ ಕೂಡ ಕಾಣಿಸುತ್ತಿಲ್ಲ,” ಎಂದು ಟೈಟಾನಿಕ್ ತಜ್ಞ ಟಿಮ್ ಮಾಲ್ಟಿನ್ ಹೇಳುತ್ತಾರೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪಾಕಿಸ್ತಾನದ ಖ್ಯಾತ ಉದ್ಯಮಿ ಶಾಹ್‌ಝಾದಾ ದಾವೂದ್ ಮತ್ತವರ ಪುತ್ರನಿದ್ದರು. ಆಕ್ಷನ್ ಏವ್ಯೇಶನ್ ಅಧ್ಯಕ್ಷ ಹರ್ನಿಷ್ ಹಾರ್ಡಿಂಗ್ ಕೂಡ ಈ ಜಲಾಂತರ್ಗಾಮಿಯಲ್ಲಿದ್ದರು.