ಅನಿವಾಸಿ ಭಾರತೀಯರ ಅಂಗಳದಲ್ಲಿ ಈಗ ರಾಜಕೀಯ ಪೈಪೋಟಿ
ಈಗಾಗಲೇ ಮೋದಿ ಮತ್ತು ಬಿಜೆಪಿ ಶುರು ಮಾಡಿದ್ದ ಆಟವನ್ನೇ ಈಗ ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತೀಯ ವಲಸಿಗರೊಂದಿಗಿನ ಈ ಸಂಬಂಧ ಸ್ಥಾಪನೆಯ ಮೂಲಕ ಅಷ್ಟೇ ಬೆಂಬಲ ಮತ್ತು ಶಕ್ತಿಯನ್ನು ಹೊಂದುವುದು ಸಾಧ್ಯವಾಗಲಿದೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ. ಏನೇ ಆದರೂ, ಒಂದು ಮಾತಂತೂ ನಿಜ. ರಾಜಕೀಯ ಕ್ಷೇತ್ರವಾಗಿ ಅನಿವಾಸಿ ಭಾರತೀಯರ ಸಂಬಂಧವು ಇಲ್ಲಿಯವರೆಗೆ ಅಡೆತಡೆಯಿಲ್ಲದ್ದಾಗಿದೆ. ಈಗ ಪ್ರಭಾವ ಮತ್ತು ಬೆಂಬಲಕ್ಕಾಗಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ದಟ್ಟಣೆ ಮತ್ತು ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದೆ.
ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು, ಜೂನ್ 4ರಂದು ಅವರು ನ್ಯೂಯಾರ್ಕ್ನಲ್ಲಿ ಭಾರತೀಯ ಸಮುದಾಯದ ಸಭೆ ಸೇರಿದಂತೆ ಹಲವಾರು ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಅವರು ಮಾರ್ಚ್ನಲ್ಲಿ ಲಂಡನ್ನಲ್ಲಿ ಇದೇ ರೀತಿಯ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇನ್ನೊಂದೆಡೆ ಪ್ರಧಾನಿ ಮೋದಿ ಮೇ 23ರಂದು ಸಿಡ್ನಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದರು. ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರೀಗ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿ ಭಾರತೀಯ ಸಮುದಾಯವನ್ನು ಒಳಗೊಂಡ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಟಸ್ಥ ನೀತಿಯಿಂದ ಹಿಡಿದು ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿನ ರಾಜಕೀಯೇತರ, ಆದರೆ ತಮ್ಮ ದೇಶಗಳಲ್ಲಿ ರಾಜತಾಂತ್ರಿಕ ಕಾರಣಕ್ಕಾಗಿ ಅನಿವಾಸಿ ಭಾರತೀಯರೊಂದಿಗಿನ ಸಾಂಸ್ಕೃತಿಕ ಮತ್ತು ಮಾನವೀಯ ಉದ್ದೇಶದ ಎಚ್ಚರಪೂರ್ವಕ, ಸಕ್ರಿಯ ತೊಡಗಿಸಿಕೊಳ್ಳುವಿಕೆಯವರೆಗೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಭಾರತಕ್ಕೆ ಹಣ ಹರಿಯುವಿಕೆಯಿಂದ ಹಿಡಿದು ಈಗ ಮೋದಿಯವರ ದೊಡ್ಡ ಸಾರ್ವಜನಿಕ ಸಭೆಗಳ ಮೂಲಕ ಹೆಚ್ಚಿನ ಮಟ್ಟದ ವೈಯಕ್ತಿಕ ಸಂಪರ್ಕದವರೆಗೆ, ಅನಿವಾಸಿ ಭಾರತೀಯರ ಜೊತೆಗಿನ ಸಂಬಂಧದ ದಾರಿ ದೊಡ್ಡದಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಬಲ ಮತ್ತು ಪ್ರಭಾವದ ಪ್ರಮುಖ ರಾಜಕೀಯ ಕ್ಷೇತ್ರವಾಗಿ ಭಾರತೀಯ ಅನಿವಾಸಿ ಹೊರಹೊಮ್ಮಿದೆ.
ಅನಿವಾಸಿ ಭಾರತೀಯರೊಂದಿಗೆ ಸ್ವಾಭಾವಿಕ ಬಾಂಧವ್ಯ ಮತ್ತು ಭಾವನಾತ್ಮಕ ಕಾಳಜಿಗಳ ಹೊರತಾಗಿಯೂ, ಅವರು ಇತರ ದೇಶಗಳ ಪ್ರಜೆಗಳಾಗಿರುವುದರಿಂದ ಇನ್ನು ಮುಂದೆ ಭಾರತೀಯರಲ್ಲ ಮತ್ತು ಅವರೊಂದಿಗಿನ ಯಾವುದೇ ಸಂಬಂಧ ಆ ದೇಶಗಳ ವ್ಯವಹಾರಗಳಲ್ಲಿ ಆಂತರಿಕವಾಗಿ ಹಸ್ತಕ್ಷೇಪ ಮಾಡುವಂತಿರುತ್ತದೆ ಎಂಬ ಅಂಶವನ್ನು ಗಮನಿಸಬೇಕು ಮತ್ತು ಒಪ್ಪಿಕೊಳ್ಳಬೇಕು ಎಂದು ನೆಹರೂ ನಂಬಿದ್ದರು. ಈ ನೀತಿ ಹೆಚ್ಚು ಕಡಿಮೆ ಇಂದಿರಾ ಗಾಂಧಿಯವರ ಆಳ್ವಿಕೆಯವರೆಗೂ ಮುಂದುವರಿಯಿತು. ಆದರೂ, ಶೀತಲ ಸಮರದ ನಂತರದ ಮತ್ತು ಮಾಹಿತಿ ತಂತ್ರಜ್ಞಾನದ ಪ್ರಾಬಲ್ಯದ ಯುಗದಲ್ಲಿ ಭಾರತೀಯ ಜನಸಂಖ್ಯೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಜಾಗತಿಕವಾಗಿ ಹೆಚ್ಚಾದಂತೆ, ಅನಿವಾಸಿ ಭಾರತೀಯರ ಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಯೋಚಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, 30 ದಶಲಕ್ಷಕ್ಕೂ ಹೆಚ್ಚು ಭಾರತೀಯರು ವಿಶ್ವದಾದ್ಯಂತ 205 ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವರ್ಷಕ್ಕೆ ಸುಮಾರು 80 ಬಿಲಿಯನ್ ಹಣ ಆ ದೇಶಗಳಿಂದ ಭಾರತಕ್ಕೆ ಹರಿದುಬರುತ್ತದೆ. ಬಿಜೆಪಿಯು ವಾಜಪೇಯಿ ಸರಕಾರವಿದ್ದ ಕಾಲದಿಂದಲೂ ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗಾಗಿ ಅನಿವಾಸಿ ಭಾರತೀಯರ ಪ್ರಾಮುಖ್ಯತೆಯ ಬಗ್ಗೆ ಧ್ವನಿಯೆತ್ತಿದೆ. ಸಾಗರೋತ್ತರ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯವೇ ಆಗಬೇಕೆಂದುಕೊಂಡ ನಿಟ್ಟಿನಲ್ಲಿ ‘ಪ್ರವಾಸಿ ಭಾರತೀಯ ದಿವಸ್’ ಆಚರಣೆ ಶುರು ಮಾಡಿದೆ.
ಆದರೆ ನಿಜವಾಗಿಯೂ ಅನಿವಾಸಿ ಭಾರತೀಯರ ಜೊತೆಗಿನ ಸಂಬಂಧದ ದಾರಿಯಲ್ಲಿ ಮಹತ್ವದ ಬದಲಾವಣೆ ಮೊದಲಾದದ್ದು ಪ್ರಸಕ್ತ ಅಧಿಕಾರದಲ್ಲಿರುವ ನರೇಂದ್ರ ಮೋದಿ ಆಡಳಿತ 2014ರಲ್ಲಿ ಶುರುವಾದಾಗ.
ಅವರು ಭೇಟಿ ನೀಡುವ ಎಲ್ಲಾ ದೇಶಗಳಲ್ಲಿ ದೊಡ್ಡ ಸಾರ್ವಜನಿಕ ಸಭೆಗಳ ರೂಪದಲ್ಲಿ ಉನ್ನತ ಮಟ್ಟದ, ನೇರ ಮತ್ತು ವೈಯಕ್ತಿಕ ಸಂಬಂಧವನ್ನು ಅನಿವಾಸಿ ಭಾರತೀಯರೊಡನೆ ರೂಪಿಸಿಕೊಳ್ಳುವ ರೀತಿಯನ್ನು ಕಾಣಬಹುದು. ಅವರು 2014ರಿಂದ 60ಕ್ಕೂ ಹೆಚ್ಚು ದೇಶಗಳಿಗೆ 100ಕ್ಕೂ ಹೆಚ್ಚು ಬಾರಿ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಭೇಟಿ ನೀಡಿದ ದೇಶಗಳಲ್ಲಿ ದೊಡ್ಡ ಮಟ್ಟದ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಲಂಡನ್ನ ವೆಂಬ್ಲಿ ಸ್ಟೇಡಿಯಂನಿಂದ ವಿಶ್ವಾದ್ಯಂತದ ಸುಮಾರು 60,000 ಅನಿವಾಸಿ ಭಾರತೀಯ ಅತಿಥಿಗಳನ್ನು-ನ್ಯೂಯಾರ್ಕ್ (19,000), ಸಿಂಗಾಪುರ (18,000), ಶಾಂಘೈ (5,000) ಮತ್ತು ಸಿಡ್ನಿ (20,000)- ಉದ್ದೇಶಿಸಿ ಅವರು ಮಾತನ್ನಾಡಿದ್ದಾರೆ.
ಮೋದಿ ಆಡಳಿತದಲ್ಲಿ ಅನಿವಾಸಿ ಭಾರತೀಯರ ಸಂಬಂಧದ ಪ್ರಮಾಣ ಮತ್ತು ತೀವ್ರತೆ ಹೆಚ್ಚಾಗಿದೆ. ಉತ್ತಮ ಮತ್ತು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ಮೇಲ್ನೋಟಕ್ಕೆ ಭಾರತೀಯ ಅನಿವಾಸಿ ಸಮುದಾಯದ ಸ್ವಯಂಪ್ರೇರಿತ ಮತ್ತು ಯಾರೂ ಮಧ್ಯಸ್ಥಿಕೆ ವಹಿಸಿರದ ಕಾರ್ಯಕ್ರಮಗಳಂತೆಯೇ ಕಾಣಿಸುತ್ತವೆ. ಜನರು ತಮ್ಮ ನಾಯಕನನ್ನು ಭೇಟಿಯಾಗಲು ಮತ್ತು ಸ್ವಾಗತಿಸಲು ಬರುತ್ತಾರೆ ಎಂಬ ಭಾವನೆಯೇ ಬರುವ ಹಾಗಿರುತ್ತವೆ. ಆದರೆ ಹಾಗಾಗುವುದು ಬಹಳ ಅಪರೂಪಕ್ಕೆ. ನಿಜವಾಗಿಯೂ ಈ ಕಾರ್ಯಕ್ರಮಗಳನ್ನು ಸಂಘಟಿಸುವುದು ರಾಯಭಾರ ಕಚೇರಿಗಳು, ಕಾನ್ಸುಲೇಟ್ಗಳು ಮತ್ತು ಬಿಜೆಪಿ ಮತ್ತು ಸಂಘ ಪರಿವಾರದ ಸಾಗರೋತ್ತರ ಶಾಖೆಗಳೂ ಸೇರಿದಂತೆ ಹಲವಾರು ಸಂಘಟನೆಗಳು. ಅವೆಲ್ಲವೂ ಈ ಕಾರ್ಯಕ್ರಮಗಳ ಹಿಂದೆ ದೊಡ್ಡ ಪ್ರಮಾಣದ ಸಿದ್ಧತೆಗಳನ್ನು ನಡೆಸುತ್ತವೆ. ನೂರಾರು ಸ್ವಯಂಸೇವಕರು ತೊಡಗಿಸಿಕೊಂಡಿರುತ್ತಾರೆ. ಮಾಧ್ಯಮ ಸಂಸ್ಥೆಗಳೂ ಇರುತ್ತವೆ. ದೂರದ ಪ್ರದೇಶಗಳಿಂದ ಜನರನ್ನು ಈ ಕಾರ್ಯಕ್ರಮಗಳಿಗೆ ಕರೆತರಲು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯೂ ಇರುತ್ತದೆ. ಈ ಕಾರ್ಯಕ್ರಮಗಳ ಬಗ್ಗೆ ಪ್ರಚಾರವೂ ಅಷ್ಟೇ ವ್ಯವಸ್ಥಿತವಾಗಿ ಮುಂಚಿತವಾಗಿಯೇ ನಡೆಯುತ್ತದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತದ ಭಾರತೀಯ ಮೂಲದ ಜನರಿಗೆ ವಿಶ್ವ ವೇದಿಕೆಯಲ್ಲಿ ಮೋದಿ ಮತ್ತು ಭಾರತದ ಬೆಳವಣಿಗೆ, ಪ್ರಭಾವವನ್ನು ತೋರಿಸಲು ರ್ಯಾಲಿಗಳು ಮತ್ತು ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಗುತ್ತದೆ. ಚುನಾವಣಾ ಗೆಲುವು, ಸರಕಾರದ ಯಶಸ್ಸು ಮತ್ತು ಮೋದಿ ನೇತೃತ್ವದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ಭರವಸೆಯನ್ನು ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಭಾವ ಮತ್ತು ಶ್ರೇಷ್ಠತೆಯನ್ನು ಬಿಂಬಿಸಲು ಬಳಸಲಾಗುತ್ತದೆ ಮತ್ತು ಯಶಸ್ವಿ ಅನಿವಾಸಿ ಭಾರತೀಯರ ಸಭೆಗಳನ್ನು ಜನರನ್ನು ಸಮಾವೇಶಗೊಳಿಸುವುದಕ್ಕಾಗಿ ಹಾಗೂ ಮೋದಿ ಪ್ರಬಲ ನಾಯಕ ಮತ್ತು ಜಾಗತಿಕವಾಗಿ ಭಾರತದ ಪ್ರಭಾವ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳನ್ನು ಕ್ರೋಡೀಕರಿಸುವುದಕ್ಕಾಗಿ ಬಳಸಲಾಗುತ್ತದೆ. ಅನಿವಾಸಿ ಭಾರತೀಯರ ಇಂತಹ ಒಗ್ಗೂಡಿಸುವಿಕೆ ದೇಶೀಯ-ಅಂತರ್ರಾಷ್ಟ್ರೀಯ ರಾಜಕೀಯ ನಿರಂತರತೆಯನ್ನು ರೂಪಿಸುತ್ತದೆ ಮತ್ತು ಅನಿವಾಸಿ ಭಾರತೀಯ ತಾನೂ ತೊಡಗಿಸಿಕೊಂಡಿರುವ ಮತ್ತು ಅಧಿಕಾರ ಹೊಂದಿರುವ ಭಾವನೆಯನ್ನು ಅನುಭವಿಸಲು ನೆರವಾಗುತ್ತದೆ. ಇದಿಷ್ಟನ್ನೂ ಮೋದಿ ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳುವುದು ನೇಪಥ್ಯದಲ್ಲಿನ ಸತ್ಯವಾಗಿರುತ್ತದೆ.
ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ವೈವಿಧ್ಯಮಯ ದೇಶದಿಂದ ಬಂದಿರುವ ಅನಿವಾಸಿ ಭಾರತೀಯರು ಏಕರೂಪದ ಜನರ ಗುಂಪಲ್ಲ ಎಂಬುದು ನಿಜ. ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಘಟನೆಗಳಿಗೆ ಅವರ ಪ್ರತಿಕ್ರಿಯೆಯೂ ಹಾಗೆಯೇ ಭಿನ್ನ. ಉದಾಹರಣೆಗೆ, ಮೂರು ರೈತ ಮಸೂದೆಗಳ ವಿರುದ್ಧ ರೈತ ಚಳವಳಿಯ ಸಂದರ್ಭದಲ್ಲಿ, ಸಿಖ್ ವಲಸಿಗರು ರೈತರ ಚಳವಳಿಯನ್ನು ಬೆಂಬಲಿಸಲು ಹಲವಾರು ದೇಶಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು ಮತ್ತು ಬಿಜೆಪಿ, ಅದರ ಸಹೋದರ ಸಂಘಟನೆಗಳು ಮಸೂದೆಗಳನ್ನು ಬೆಂಬಲಿಸಿದವು.
ಈಗ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿವಿಧ ದೇಶಗಳಲ್ಲಿರುವ ಅನಿವಾಸಿ ಭಾರತೀಯ ಜನರನ್ನು ಸೇರಿಸುವುದಕ್ಕೆ ತೊಡಗಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ ಲಂಡನ್ನಲ್ಲಿ ಅತ್ಯಂತ ಯಶಸ್ವಿ ಪ್ರವಾಸ ಮತ್ತು ಭಾರತೀಯ ಸಮುದಾಯದ ಸದಸ್ಯರೊಂದಿಗಿನ ಭೇಟಿಯ ಬಳಿಕ ಜೂನ್ ಮೊದಲ ವಾರದಲ್ಲಿ ಮತ್ತೊಂದು ಯಶಸ್ವಿ ಪ್ರವಾಸವನ್ನು ಕೈಗೊಂಡ ರಾಹುಲ್, ಅಮೆರಿಕದಲ್ಲಿ ಅನಿವಾಸಿ ಭಾರತೀಯರ ಜೊತೆಗೆ ಮಹತ್ವದ ಸಂವಹನ ನಡೆಸಿದರು.
ಈಗಾಗಲೇ ಮೋದಿ ಮತ್ತು ಬಿಜೆಪಿ ಶುರು ಮಾಡಿದ್ದ ಆಟವನ್ನೇ ಈಗ ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತೀಯ ವಲಸಿಗರೊಂದಿಗಿನ ಈ ಸಂಬಂಧ ಸ್ಥಾಪನೆಯ ಮೂಲಕ ಅಷ್ಟೇ ಬೆಂಬಲ ಮತ್ತು ಶಕ್ತಿಯನ್ನು ಹೊಂದುವುದು ಸಾಧ್ಯವಾಗಲಿದೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ. ಏನೇ ಆದರೂ, ಒಂದು ಮಾತಂತೂ ನಿಜ. ರಾಜಕೀಯ ಕ್ಷೇತ್ರವಾಗಿ ಅನಿವಾಸಿ ಭಾರತೀಯರ ಸಂಬಂಧವು ಇಲ್ಲಿಯವರೆಗೆ ಅಡೆತಡೆಯಿಲ್ಲದ್ದಾಗಿದೆ. ಈಗ ಪ್ರಭಾವ ಮತ್ತು ಬೆಂಬಲಕ್ಕಾಗಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ದಟ್ಟಣೆ ಮತ್ತು ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದೆ.
(ಕೃಪೆ: thewire.in)







