ಉಡುಪಿ: ಚುರುಕುಗೊಳ್ಳುತ್ತಿರುವ ಮುಂಗಾರು

ಉಡುಪಿ, ಜೂ.21: ಜಿಲ್ಲೆಗೆ ನೈಋತ್ಯ ಮಾನ್ಸೂನ್ ಕಾಲಿಟ್ಟ ಎರಡು ವಾರಗಳ ಬಳಿಕ ಮುಂಗಾರು ಚುರುಕು ಗೊಳ್ಳತೊಡಗಿದೆ. ನಿನ್ನೆ ಸಂಜೆಯಿಂದ ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣ ಕಂಡುಬಂದಿದ್ದು, ಇಂದು ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದೆ. ಸಂಜೆ ವೇಳೆ ಮಳೆ ಬಿರುಸುಗೊಂಡಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 20.4ಮಿ.ಮೀ. ಮಳೆಯಾಗಿದೆ. ಉಡುಪಿ ಮತ್ತು ಕಾಪುನಲ್ಲಿ ತಲಾ 31.6ಮಿ.ಮೀ, ಹೆಬ್ರಿಯಲ್ಲಿ 24.7ಮಿ.ಮೀ, ಕಾರ್ಕಳದಲ್ಲಿ 22.3ಮಿ.ಮೀ., ಕುಂದಾಪುರದಲ್ಲಿ 19.6, ಬ್ರಹ್ಮಾವರದಲ್ಲಿ 15.1 ಹಾಗೂ ಬೈಂದೂರಿನಲ್ಲಿ 9.4ಮಿ.ಮೀ. ಮಳೆ ಬಿದ್ದಿದೆ.
ಮನೆಗೆ ಸಿಡಿಲು: ಮಂಗಳವಾರ ಸಂಜೆ ವೇಳೆ ಕಾರ್ಕಳ ತಾಲೂಕು ಇನ್ನಾದ ಸಂಜೀವ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇಂದು ಮುಂಜಾನೆ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ವಸಂತ ಭಂಡಾರಿ ಎಂಬವರ ಮನೆಯ ಮೇಲೆ ಮರಬಿದ್ದು ಮನೆಗೆ ಹಾನಿಯುಂಟಾದ ಬಗ್ಗೆ ವರದಿ ಬಂದಿದೆ.
ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 32.7ಡಿಗ್ರಿ ಸೆಲ್ಷಿಯಸ್ ಇದ್ದು, ಕನಿಷ್ಠ 23.9 ಡಿಗ್ರಿ ಸೆ.ಆಗಿದೆ. ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ ಯಂತೆ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಜೂ.25ರ ಬಳಿಕ ಮಳೆ ಜೋರಾಗಿದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಗಂಟೆಗೆ 40ರಿಂದ 45ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.







