ಮಣಿಪುರ:ಯೋಗದಿನ ಬಹಿಷ್ಕರಿಸಿ ಪ್ರಧಾನಿ ಮೋದಿ ಪ್ರತಿಕೃತಿ ದಹನ

ಗುವಾಹಟಿ: ಮಣಿಪುರದಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಬಹಿಷ್ಕರಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾರೆ. ಈ ನಡುವೆ ಮಂಗಳವಾರ ರಾತ್ರಿ ಎರಡು ಸ್ಥಳಗಳಲ್ಲಿ ಗುಂಡು ಹಾರಾಟ ನಡೆದಿರುವುದು ವರದಿಯಾಗಿದೆ.
ಥೌಬಾಲ್ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ರಾಜ್ಯದಲ್ಲಿಯ ಜನಾಂಗೀಯ ಹಿಂಸಾಚಾರದ ಕುರಿತು ಮೋದಿಯವರ ದಿವ್ಯ ನಿರ್ಲಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರು.
ಮಣಿಪುರದಲ್ಲಿ ಅನಿಯಂತ್ರಿತ ಹಿಂಸಾಚಾರ ಮತ್ತು ಜನರ ಮಾರಣಹೋಮ ನಡೆಯುತ್ತಿದ್ದರೆ ಪ್ರಧಾನಿ ವಿಶ್ವಸಂಸ್ಥೆಯಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮಿಸುತ್ತಿದ್ದಾರೆ ಹಾಗೂ ಶಾಂತಿ ಮತ್ತು ಸೌಹಾರ್ದದ ಸಂದೇಶವನ್ನು ಹರಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ವಿಷಾದ ವ್ಯಕ್ತಪಡಿಸಿದರು.
ಮಂಗಳವಾರ ರಾತ್ರಿ ಸುಗ್ನು ಮತ್ತು ಕಂಗ್‌ಚುಪ್ ಎಂಬಲ್ಲಿ ಗುಂಡು ಹಾರಾಟದ ಘಟನೆಗಳು ನಡೆದಿದ್ದು,ಯಾವುದೇ ಸಾವುನೋವು ವರದಿಯಾಗಿಲ್ಲ.
Next Story





