ಯೋಗವು ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಂದ ಮುಕ್ತ: ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನರೇಂದ್ರ ಮೋದಿ

ನ್ಯೂಯಾರ್ಕ್: ಯೋಗವು ನಿಜವಾಗಿಯೂ ಸಾರ್ವತ್ರಿಕವಾಗಿದೆ. ಯಾಕೆಂದರೆ ಇದು ಹಕ್ಕುಸ್ವಾಮ್ಯ, ಪೇಟೆಂಟ್ ಮತ್ತು ರಾಯಲ್ಟಿ(ರಾಯಧನ) ಪಾವತಿಯಿಂದ ಮುಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ 9ನೇ ಅಂತರ್‌ರಾಷ್ಟ್ರೀಯ ಯೋಗದಿನಾಚರಣೆಯ ನೇತೃತ್ವ ವಹಿಸಿದ್ದ ಮೋದಿ, ಈ ಕಾರ್ಯಕ್ರಮಕ್ಕೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಆಗಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ‘ಯೋಗವು ಭಾರತದಿಂದ ಬಂದಿದೆ ಮತ್ತು ಇದೊಂದು ಪುರಾತನ ಆಚರಣೆಯಾಗಿದೆ. ಹಕ್ಕುಸ್ವಾಮ್ಯ, ಪೇಟೆಂಟ್ ಅಥವಾ ರಾಯಲ್ಟಿಯಿಂದ ಮುಕ್ತವಾಗಿರುವ ಯೋಗವನ್ನು ನಿಮ್ಮ ವಯಸ್ಸು, ಲಿಂಗ ಮತ್ತು ದೇಹಕ್ಷಮತೆಗೆ ಸರಿಹೊಂದಿಸಬಹುದು. ಇದು ಅತ್ಯಂತ ಸುಲಭವಾಗಿದೆ ಮತ್ತು ನಿಜವಾಗಿಯೂ ಸಾರ್ವತ್ರಿಕವಾಗಿದೆ. ಯೋಗ ಎಂದರೆ ಒಗ್ಗೂಡುವುದು. ಅಂತರ್‌ರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ಬೆಂಬಲಿಸಲು ಇಡೀ ಜಗತ್ತೇ ಒಂದಾಗಿರುವುದು ಅತ್ಯಂತ ಮಹತ್ವದ ವಿಷಯ
ವಾಗಿದೆ’ ಎಂದು ಮೋದಿ ಈ ಸಂದರ್ಭ ಹೇಳಿದರು. ಯೋಗ ಮಾಡುವ ಮೈದಾನದಲ್ಲಿ ನೂರಾರು ಹಳದಿ ಚಾಪೆಗಳನ್ನು ಸಿದ್ಧಪಡಿಸಲಾಗಿದ್ದು ಯೋಗ ಉತ್ಸಾಹಿಗಳು ಮತ್ತು ಅಭ್ಯಾಸಿಗಳು ಪಾಲ್ಗೊಂಡಿದ್ದರು. ಬದಿಯಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.