ಜಿನ್‌ಪಿಂಗ್ ಸರ್ವಾಧಿಕಾರಿ ಎಂದ ಬೈಡನ್: ಚೀನಾ ತೀಕ್ಷ್ಣ ಪ್ರತಿಕ್ರಿಯೆ
ವಾಶಿಂಗ್ಟನ್: ಕ್ಯಾಲಿಫೋರ್ನಿಯಾ ದಲ್ಲಿ ಮಂಗಳವಾರ ನಡೆದ ಸಮಾರಂಭ ವೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಚೀನಾದ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ರನ್ನು ಸರ್ವಾಧಿಕಾರಿಗೆ ಹೋಲಿಸಿದ್ದು ಇದಕ್ಕೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷಕ್ಕೆ ನಿಧಿಸಂಗ್ರಹಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಡನ್, ಫೆಬ್ರವರಿಯಲ್ಲಿ ಚೀನಾದ ಬೇಹುಗಾರಿಕಾ ಬಲೂನನ್ನು ಹೊಡೆದುರುಳಿಸಿದ್ದಕ್ಕೆ ಜಿನ್‌ಪಿಂಗ್ ತೀವ್ರ ಆಕ್ರೋಶಗೊಂಡಿದ್ದರು ಎಂದರು.
‘ಎರಡು ಪೆಟ್ಟಿಗೆ ತುಂಬಾ ಬೇಹುಗಾರಿಕಾ ಸಾಧನಗಳಿದ್ದ ಆ ಬಲೂನನ್ನು ನಾವು ಹೊಡೆದುರುಳಿಸಿದಾಗ ಕ್ಸಿನ್ ಜಿನ್‌ಪಿಂಗ್ ತುಂಬಾ ಅಸಮಾಧಾನಗೊಂಡಿದ್ದರು. ಆದರೆ ಇದು ಅವರಿಗೆ ತಿಳಿಯದೆ ನಡೆದ ಘಟನೆಯೇ ? ಇದು ಗಂಭೀರ ವಿಷಯ. ಏನಾಯಿತು ಎಂಬುದು ತಿಳಿಯದೆ ಇರುವುದು ಸರ್ವಾಧಿಕಾರಿಗಳಿಗೆ ತುಂಬಾ ಮುಜುಗರ ತರುವ ವಿಷಯವಾಗಿದೆ’ ಎಂದು ಬೈಡನ್ ಹೇಳಿದ್ದಾರೆ. ಚೀನಾ ವಾಸ್ತವವಾಗಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಜಿನ್‌ಪಿಂಗ್‌ಗೆ ಅತ್ಯಂತ ಆತಂಕ ತಂದಿರುವ ವಿಷಯವೆಂದರೆ ನಾವು ಕ್ವಾಡ್ ಒಕ್ಕೂಟ ಸ್ಥಾಪಿಸಿರುವುದು. ಆಸ್ಟ್ರೇಲಿಯ, ಭಾರತ, ಜಪಾನ್ ಮತ್ತು ಅಮೆರಿಕ ದೇಶಗಳ ಕ್ವಾಡ್ ಸಂಘಟನೆ ಏಶ್ಯ ಪೆಸಿಫಿಕ್ ಸಮುದ್ರವ್ಯಾಪ್ತಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧವಾಗಿದೆ. ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸಂಬಂಧಿಸಿ ಈ ನಾಲ್ಕು ದೇಶಗಳು ಒಗ್ಗೂಡಿ ಕಾರ್ಯ
ನಿರ್ವಹಿಸುತ್ತಿವೆ ಎಂದು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಉದ್ದೇಶದೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಕ್ಕೆ ಭೇಟಿ ನೀಡಿದ ಮರುದಿನವೇ ಬೈಡನ್ ಅವರ ಹೇಳಿಕೆ ಹೊರಬಿದ್ದಿದೆ.
ಈ ಹೇಳಿಕೆಯನ್ನು ಖಂಡಿಸಿರುವ ಚೀನಾ ‘ಇದು ಬಹಿರಂಗ ರಾಜಕೀಯ ಪ್ರಚೋದನೆ’ ಎಂದು ಟೀಕಿಸಿದೆ. ಅಮೆರಿಕದ ಕಡೆಯಿಂದ ವ್ಯಕ್ತವಾದ ಟೀಕೆ ಅತ್ಯಂತ ಬೇಜವಾಬ್ದಾರಿಯುತ ಮತ್ತು ಅಸಮಂಜಸವಾಗಿದೆ. ಇವು ಮೂಲಭೂತ ವಿಷಯಗಳು, ರಾಜತಾಂತ್ರಿಕ ಶಿಷ್ಟಾಚಾರ ಮತ್ತು ಚೀನಾದ ರಾಜಕೀಯ ಘನತೆಯನ್ನು ತೀವ್ರವಾಗಿ ಉಲ್ಲಂಘಿಸಿವೆ. ಈ ಬಗ್ಗೆ ನಮಗೆ ತೀವ್ರ ಅಸಮಾಧಾನವಿದ್ದು ಇದನ್ನು ದೃಢವಾಗಿ ವಿರೋಧಿಸುತ್ತೇವೆ’ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.