ವಿಶ್ವಸಂಸ್ಥೆಯ ನೆರವು ಯೋಜನೆಗೆ ಆರ್ಥಿಕ ಮುಗ್ಗಟ್ಟು ;ವಿಶ್ವಸಂಸ್ಥೆ ಮುಖ್ಯಸ್ಥರ ಕಳವಳ
ಜಿನೀವಾ: ಜಾಗತಿಕವಾಗಿ ಮಾನವೀಯ ನೆರವಿನ ಅಗತ್ಯದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದರೂ ವಿಶ್ವಸಂಸ್ಥೆಯ ನೆರವು ನಿಧಿ ದೀರ್ಘಕಾಲದಿಂದ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲದಿಂದ ಕಡಿಮೆ ದೇಣಿಗೆ ಸಂಗ್ರಹವಾಗುತ್ತಿರುವುದು ಮತ್ತು ಮಾನವೀಯ ನೆರವಿನ ಪ್ರಮಾಣ ದಾಖಲೆ ಮಟ್ಟಕ್ಕೆ ತಲುಪಿರುವುದು ಈ ವ್ಯವಸ್ಥೆಯನ್ನು ಕುಸಿದು ಬೀಳುವ ಹಂತಕ್ಕೆ ತಂದಿರಿಸಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಮಾನವೀಯ ವ್ಯವಹಾರ ವಿಭಾಗದ ಸಭೆಯಲ್ಲಿ ಮಾತನಾಡುತ್ತಿದ್ದ ಗುಟೆರಸ್ ಹೇಳಿದ್ದಾರೆ. ಈ ವರ್ಷ ವಿಶ್ವಸಂಸ್ಥೆಯ ಜಾಗತಿಕ ಮಾನವೀಯ ನೆರವು ವಿತರಣೆ ವ್ಯವಸ್ಥೆಗೆ ಅಗತ್ಯವಿರುವ ನಿಧಿಯಲ್ಲಿ ಇದುವರೆಗೆ ಕೇವಲ 20ಶೇ.ದಷ್ಟು ಮಾತ್ರ ಸಂಗ್ರಹವಾಗಿದೆ. ಇದು ಬಿಕ್ಕಟ್ಟಿನ ಒಳಗೆ ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗುತ್ತಿದೆ.
ನಿಧಿ ಬಿಕ್ಕಟ್ಟಿಗೆ ಪರಿಹಾರ ಹುಡುಕದಿದ್ದರೆ ಮಾನವೀಯ ನೆರವು ವಿತರಣೆ ಪ್ರಮಾಣ ಇನ್ನಷ್ಟು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ ಎಂದವರು ಹೇಳಿದ್ದಾರೆ.
2.2 ದಶಲಕ್ಷ ಜನರು ತಮ್ಮ ಮನೆಯಿಂದ ಪಲಾಯನ ಮಾಡಲು ಕಾರಣವಾದ ಗಂಭೀರ ಮಾನವೀಯ ಬಿಕ್ಕಟ್ಟಿನಿಂದ ಬಳಲುತ್ತಿರುವ ಸುಡಾನ್‌ಗೆ ಸೋಮವಾರ ಅಂತರ್‌ರಾಷ್ಟ್ರೀಯ ದಾನಿಗಳು ಸುಮಾರು 1.5 ಶತಕೋಟಿ ಡಾಲರ್‌ನಷ್ಟು ನೆರವಿನ ವಾಗ್ದಾನ ನೀಡಿದ್ದಾರೆ. ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಘರ್ಷಣೆ ಆರಂಭಕ್ಕೂ ಮುನ್ನವೇ, ಆ ದೇಶಕ್ಕೆ 2.57 ಶತಕೋಟಿ ಡಾಲರ್ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ ಇದರಲ್ಲಿ ಕೇವಲ 17ಶೇ.ದಷ್ಟು ದೇಣಿಗೆ ಮಾತ್ರ ಸಂಗ್ರಹವಾಗಿದೆ ಎಂದು ವರದಿಯಾಗಿದೆ.