ಮಾನವಹಕ್ಕುಗಳ ಬಗ್ಗೆ ಮೋದಿ ಜೊತೆ ಚರ್ಚಿಸಿ: 75 ಅಮೆರಿಕನ್ ಸಂಸದರಿಂದ ಬೈಡನ್‌ಗೆ ಪತ್ರ

ವಾಶಿಂಗ್ಟನ್: ಅಮೆರಿಕ ಭೇಟಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಕುರಿತ ವಿಷಯಗಳನ್ನು ಪ್ರಸ್ತಾವಿಸಬೇಕೆಂದು ಅಧ್ಯಕ್ಷ ಜೋ ಬೈಡನ್ ಅವರನ್ನು ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 75 ಸೆನೆಟರುಗಳು ಹಾಗೂ ಸಂಸದರು ಮಂಗಳವಾರ ಆಗ್ರಹಿಸಿದ್ದಾರೆ.
ಭಾರತದಲ್ಲಿ ರಾಜಕೀಯ ಸಂವಾದಕ್ಕೆ ಕ್ಷೀಣಿಸುತ್ತಿರುವ ಅವಕಾಶಗಳು, ಧಾರ್ಮಿಕ ಅಸಹಿಷ್ಣುತೆಯ ಹೆಚ್ಚಳ,ಜನಪರ ಸಂಘಟನೆಗಳು ಹಾಗೂ ಪತ್ರಕರ್ತರ ಗುರಿಯಿರಿಸುವುದು, ಧಾರ್ಮಿಕ ಸ್ವಾತಂತ್ರ ಹಾಗೂ ಇಂಟರ್‌ನೆಟ್ ಮೇಲೆೆ ನಿರ್ಬಂಧಗಳ ಹೆಚ್ಚಳದ ಬಗ್ಗೆ ತಾವು ಕಳವಳಗೊಂಡಿರುವುದಾಗಿ ಸಂಸದರು ಬೈಡನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘‘ನಾವು ಯಾವುದೇ ಭಾರತೀಯ ನಾಯಕ ಅಥವಾ ರಾಜಕೀಯ ಪಕ್ಷವನ್ನು ಅನುಮೋದಿಸುವುದಿಲ್ಲ. ಆದರೆ ಅಮೆರಿಕದ ವಿದೇಶಾಂಗ ನೀತಿಯ ಪ್ರಧಾನ ಭಾಗವಾಗಿರುವಂತಹ ಪ್ರಮುಖ ಸಿದ್ಧಾಂತಗಳಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ’’ ಎಂದು ಈ ನಾಯಕರು ತಿಳಿಸಿದ್ದಾರೆ.
ಅಮೆರಿಕ ಹಾಗೂ ಭಾರತವು ಪರಸ್ಪರ ನಿಕಟ ಹಾಗೂ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳಬೇಕೆಂದು ತಾವು ಬಯಸಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಸಂಸದರು ಮಂಗಳವಾರ ಬೈಡನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘‘ಸ್ನೇಹಿತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಪ್ರಾಮಾಣಿಕತೆ ಹಾಗೂ ನೇರನಡೆನುಡಿಗಳಿಂದ ಚರ್ಚಿಸಬೇಕೆಂದು ಅಮೆರಿಕ-ಭಾರತ ಬಾಂಧವ್ಯದ ದೀರ್ಘಸಮಯದ ಬೆಂಬಲಿಗರಾದ ನಾವು ಬಯಸುತ್ತೇವೆ ಎಂದವರು ಹೇಳಿದ್ದಾರೆ. ಭಾರತ ಹಾಗೂ ಅಮೆರಿಕ ನಡುವೆ ಹಿತಾಸಕ್ತಿಗಳು ಹಂಚಿಕೆಯಾಗಿರುವ ಹಲವು ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಸುವ ಜೊತೆಗೆ, ಕಳವಳಕಾರಿಯಾದ ವಿಷಯಗಳ ಬಗ್ಗೆಯೂ ಪ್ರಧಾನಿ ಮೋದಿಯವರೊಂದಿಗೆ ಪ್ರಸ್ತಾವಿಸಬೇಕು ಎಂದವರು ಹೇಳಿದ್ದಾರೆ.
ಬೈಡನ್ ಅವರು ಮಾನವಹಕ್ಕುಗಳು, ಪತ್ರಿಕಾ ಸ್ವಾತಂತ್ರ, ಧಾರ್ಮಿಕ ಸ್ವಾತಂತ್ರ ಹಾಗೂ ಬಹುತ್ವವಾದವನ್ನು ಅಮೆರಿಕದ ವಿದೇಶಾಂಗ ನೀತಿಯ ಪ್ರಮುಖ ತತ್ವಗಳಾಗಿ ರೂಪಿಸಿದ್ದಾರೆ ಎಂದವರು ಹೇಳಿದ್ದಾರೆ.
ಜಾಗತಿಕ ರಂಗದಲ್ಲಿ ಈ ವೌಲ್ಯಗಳನ್ನು ವಿಶ್ವಸನೀಯತೆಯೊಂದಿಗೆ ಮುನ್ನಡೆಸುವ ಜೊತೆಗೆ, ನಾವು ಅವುಗಳನ್ನು ಅಮೆರಿಕದಲ್ಲಿ ಅನುಸ ರಿಸುತ್ತಿರುವ ಹಾಗೆ ಸ್ನೇಹಿತರು ಹಾಗೂ ಶತ್ರುವಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಡೆಮಾಕ್ರಟಿಕ್ ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಜೂನ್ 21ರಿಂದ ಜೂನ್ 24ರವರೆಗೆ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು, ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಬಳಿಕ ಅಮೆರಿಕ ಆಡಳಿತದಿಂದ ವಾಶಿಂಗ್ಟನ್ ಭೇಟಿಗೆ ಆಹ್ವಾನಿಸಲ್ಪಟ್ಟ ಭಾರತದ ಮೂರನೇ ನಾಯಕರಾಗಿದ್ದಾರೆ.
ತನ್ನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಜೂನ್ 22ರಂದು ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೈಡೆನ್ ಜೊತೆ ಮಾತುಕತೆಯ ನಡೆಸಿರುವ ಜೊತೆಗೆ ಅವರು ಉಪಾಧ್ಯಕ್ಷೆ ಕಮಲಾ ಹಾರಿಸ್ ಅವರನ್ನು ಭೇಟಿಯಾಗಲಿದ್ದಾರೆ. ಟೆಲ್ಸಾ ಮಾಲಕ ಎಲನ್ ಮಸ್ಕ್, ನೊಬೆಲ್ ಪ್ರಶಸ್ತಿ ಪುರಸ್ಕೃತ ಪೌಲ್ ರೋಮರ್ ಹಾಗೂ ಖಗೋಳ ಭೌತಶಾಸ್ತ್ರ ವಿಜ್ಞಾನಿ ನೀಲ್ ಡೆಗ್ರಾಸ್ಸ್‌ಟೈಸನ್ ಅವರುಗಳು ಮೋದಿ ಭೇಟಿಯಾಗಲಿರುವ ಇತರ ಗಣ್ಯರು.







