ಮಹಿಳೆಯರ ಉದಯೋನ್ಮುಖ ಏಶ್ಯ ಕಪ್: ಬಾಂಗ್ಲಾವನ್ನು 31 ರನ್‌ನಿಂದ ಸೋಲಿಸಿ ಪ್ರಶಸ್ತಿ ಗೆದ್ದ ಭಾರತ
ಮೊಂಗ್‌ಕಾಕ್ (ಹಾಂಕಾಂಗ್): ಭಾರತದ 23 ವರ್ಷಕ್ಕಿಂತ ಕೆಳಗಿನ ಮಹಿಳಾ ಕ್ರಿಕೆಟ್ ತಂಡವು, ಮಹಿಳಾ ಉದಯೋನ್ಮುಖ ಏಶ್ಯ ಕಪ್ ಟಿ20 ಪಂದ್ಯಾವಳಿಯ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಭರ್ಜರಿ 31 ರನ್‌ಗಳಿಂದ ಸೋಲಿಸಿದೆ.
ಭಾರತದ ಗೆಲುವಿನಲ್ಲಿ ಸ್ಪಿನ್ನರ್‌ಗಳಾದ ಶ್ರೇಯಾಂಕ ಪಾಟೀಲ್ ಮತ್ತು ಮನ್ನತ್ ಕಶ್ಯಪ್ ಪ್ರಮುಖ ಪಾತ್ರ ವಹಿಸಿದರು. ಶ್ರೇಯಾಂಕ 4 ಓವರ್‌ಗಳಲ್ಲಿ 13 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರೆ, ಮನ್ನತ್ 4 ಓವರ್‌ಗಳಲ್ಲಿ 20 ರನ್‌ಗಳನ್ನು ಕೊಟ್ಟು 3 ವಿಕೆಟ್‌ಗಳನ್ನು ಗಳಿಸಿದರು.
ಹಾಂಕಾಂಗ್‌ನ ಮೊಂಗ್‌ಕಾಕ್‌ನಲ್ಲಿರುವ ಮಿಶನ್ ರೋಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಕಳಪೆಯಾಗಿತ್ತು. ಅದಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 127 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ದಿನೇಶ್ ವೃಂದಾ 29 ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿ ಗರಿಷ್ಠ ಸ್ಕೋರ್‌ದಾರರಾದರು. ಕನಿಕಾ ಅಹುಜ 23 ಎಸೆತಗಳಲ್ಲಿ 30 ರನ್‌ಗಳನ್ನು ಬಾರಿಸಿ ಅಜೇಯರಾಗಿ ಉಳಿದರು.
ಭಾರತೀಯ ಬ್ಯಾಟರ್‌ಗಳು ದೊಡ್ಡ ಭಾಗೀದಾರಿಕೆಗಳನ್ನು ನಡೆಸದಂತೆ ಬಾಂಗ್ಲಾದೇಶಿ ಬೌಲರ್‌ಗಳು ನೋಡಿಕೊಂಡರು.
ಬಳಿಕ ಭಾರತೀಯ ಬೌಲರ್‌ಗಳೂ ಬಿಗು ಬೌಲಿಂಗ್ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳ ಮೇಲೆ ನಿಯಂತ್ರಣ ಹೇರಿದರು. ಆಫ್ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್, ಶ್ರೇಯಾಂಕಗೆ ಇನ್ನೊಂದು ಬದಿಯಲ್ಲಿ ಬೆಂಬಲ ನೀಡಿದರು. ಕನಿಕಾ ಅಹುಜ ತನ್ನ ಆಫ್-ಬ್ರೇಕ್ ಬೌಲಿಂಗ್ ಮೂಲಕ 23 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು.
ಬಾಂಗ್ಲಾದೇಶದ ಪರವಾಗಿ ಶೋಭನಾ ಮೋಸ್ಟರಿ 16 ರನ್‌ಗಳನ್ನು ಗಳಿಸಿದರೆ, ನಹಿದಾ ಅಖ್ತರ್ 17 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಬಾಂಗ್ಲಾದೇಶವು 19.2 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯ ಗೊಳಿಸಿತು.