ನಿಧಾನ ಗತಿಯ ಬೌಲಿಂಗ್: ಇತ್ತಂಡಗಳ ಆಟಗಾರರ 40 ಶೇ. ಪಂದ್ಯ ಶುಲ್ಕ ಕಡಿತ
ಆಸಿಸ್, ಇಂಗ್ಲೆಂಡ್‌ನ ಡಬ್ಲ್ಯುಟಿಸಿ ಖಾತೆಗಳಿಂದ 2 ಅಂಕ ಕಡಿತ
ಬೆಂಗಳೂರು: ಎಜ್‌ಬಾಸ್ಟನ್‌ನಲ್ಲಿ ಮಂಗಳವಾರ ಮುಕ್ತಾಯಗೊಂಡ ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ನಿಧಾನ ಗತಿಯಲ್ಲಿ ಬೌಲಿಂಗ್ ಮಾಡಿರುವುದಕ್ಕಾಗಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಖಾತೆಗಳಿಂದ ಎರಡು ಅಂಕಗಳನ್ನು ಬುಧವಾರ ಕಡಿತಗೊಳಿಸಲಾಗಿದೆ.
ಅದೂ ಅಲ್ಲದೆ, ಎರಡೂ ತಂಡಗಳ ಆಟಗಾರರಿಗೆ ಅವರ ಪಂದ್ಯ ಶುಲ್ಕದ 40 ಶೇ. ದಂಡ ವಿಧಿಸಲಾಗಿದೆ.
ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ಎರಡು ಓವರ್‌ಗಳನ್ನು ಕಡಿಮೆ ಬೌಲ್ ಮಾಡಿವೆ ಎಂಬ ತೀರ್ಮಾನಕ್ಕೆ ಬಂದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಉನ್ನತ ಪಂದ್ಯ ರೆಫರಿಗಳ ಸಮಿತಿಯ ಆ್ಯಂಡಿ ಪೈಕ್ರಾಫ್ಟ್, ಈ ದಂಡಗಳನ್ನು ವಿಧಿಸಿದರು. ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ದಂಡಗಳನ್ನು ಸ್ವೀಕರಿಸಿದ್ದಾರೆ. ಹಾಗಾಗಿ, ಮುಂದೆ ವಿಚಾರಣೆ ನಡೆಯುವ ಅಗತ್ಯವಿರುವುದಿಲ್ಲ.
ಕನಿಷ್ಠ ಓವರ್ ದರ ಅಪರಾಧಕ್ಕೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ 2.22 ವಿಧಿಯಂತೆ, ನಿಗದಿತ ಅವಧಿಯಲ್ಲಿ ಕಡಿಮೆ ಬಿದ್ದ ಪ್ರತೀ ಓವರ್‌ಗೆ ಆಟಗಾರರಿಗೆ ಅವರ ಪಂದ್ಯಶುಲ್ಕದ 20 ಶೇ. ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಎರಡು ಓವರ್‌ಗಳು ಕಡಿಮೆ ಬಿದ್ದಿರುವುದರಿಂದ ಪಂದ್ಯ ಶುಲ್ಕದ ಒಟ್ಟು 40 ಶೇ. ದಂಡವನ್ನು ಆಟಗಾರರಿಗೆ ವಿಧಿಸಲಾಗಿದೆ.
ಇದಕ್ಕೆ ಹೆಚ್ಚುವರಿಯಾಗಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಿಯಮಾವಳಿಗಳಂತೆ, ಕಡಿಮೆ ಬಿದ್ದ ಪ್ರತಿಯೊಂದು
ಓವರ್‌ಗೆ ಒಂದು ಅಂಕವನ್ನು ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಖಾತೆಗಳಿಂದ ಕಡಿತಗೊಳಿಸಲಾಗುತ್ತದೆ. ಹಾಗಾಗಿ, ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ಓವರ್‌ಗಳು ಕಡಿಮೆ ಬಿದ್ದುದರಿಂದ ಎರಡೂ ತಂಡಗಳ ಖಾತೆಗಳಿಂದ ತಲಾ ಎರಡು ಅಂಕಗಳನ್ನು ಕಡಿತಗೊಳಿಸಲಾಗಿದೆ.
ಎರಡು ಅಂಕಗಳನ್ನು ಕಳೆದುಕೊಂಡ ಬಳಿಕ, ಆಸ್ಟ್ರೇಲಿಯವು ಈಗ ತನ್ನ ಖಾತೆಯಲ್ಲಿ 10 ಅಂಕಗಳನ್ನು ಹೊಂದಿದ್ದರೆ, ಇಂಗ್ಲೆಂಡ್ 2 ಅಂಕಗಳನ್ನು ಹೊಂದಿದೆ. ಈ ಮೂಲಕ ಅದು 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿರುವ ತನ್ನ ಎಲ್ಲಾ 8 ಪ್ರತಿಸ್ಪರ್ಧಿಗಳಿಂದ ಹಿಂದೆ ಬಿದ್ದಿದೆ.
ಆಸ್ಟ್ರೇಲಿಯವು ಹಾಲಿ ಆ್ಯಶಸ್ ಸರಣಿಯ ಮೊದಲ ಪಂದ್ಯವನ್ನು ಮಂಗಳವಾರ ಎರಡು ವಿಕೆಟ್‌ಗಳಿಂದ ರೋಮಾಂಚಕವಾಗಿ ಗೆದ್ದಿದೆ.
ಈ ತಿಂಗಳ ಆರಂಭದಲ್ಲಿ ಓವಲ್‌ನಲ್ಲಿ ನಡೆದ ಹಿಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ, ಭಾರತವನ್ನು ಸೋಲಿಸಿದ ಆಸ್ಟ್ರೇಲಿಯವು ತನ್ನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿತ್ತು.







