ಕನಿಷ್ಠ 450 ಕ್ಷೇತ್ರಗಳಲ್ಲಿ ನೇರಸ್ಪರ್ಧೆ: ಲೋಕಸಭಾ ಚುನಾವಣೆಗೆ ಪ್ರತಿಪಕ್ಷ ಕಾರ್ಯತಂತ್ರ
ಜೂನ್ 23ರ ಪಾಟ್ನಾ ಸಮಾವೇಶದಲ್ಲಿ ಚರ್ಚೆ ಸಾಧ್ಯತೆ

ಹೊಸದಿಲ್ಲಿ: ಬಿಜೆಪಿ ವಿರುದ್ಧ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು, ಜಾತಿಗಣತಿ ಬಗ್ಗೆ ಒಮ್ಮತ, ಕೇಂದ್ರೀಯ ತನಿಖಾಸಂಸ್ಥೆಗಳ ಕಿರುಕುಳದ ವಿರುದ್ಧ ಚಳವಳಿ,ಹಿಂದೂ-ಮುಸ್ಲಿಮ್ ಕೋಮುಧ್ರುವೀಕರಣ ಹಾಗೂ ವಿಶಾಲವಾದ ಸಂಯುಕ್ತ ಪ್ರತಿಪಕ್ಷದ ರಚನೆ ಇವು ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಚರ್ಚೆಗೆ ಬರಲಿರುವ ಸಂಭಾವ್ಯ ಮುಖ್ಯ ವಿಷಯಗಳಾಗಲಿವೆ.
ಪ್ರತಿಪಕ್ಷಗಳ ಸಭೆಯು ಈ ಮೊದಲು ಜೂನ್ 12ರಂದು ನಡೆಯುವುದಾಗಿ ನಿಗದಿಯಾಗಿತ್ತು. ಆದರೆ ರಾಹುಲ್‌ಗಾಂಧಿ ಅವರು ದೀರ್ಘಾವಧಿಯ ಬ್ರಿಟನ್ ಪ್ರವಾಸಕ್ಕೆ ತೆರಳಿದ್ದರಿಂದ, ಸಭೆಯನ್ನು ಮುಂದೂಡಲಾಗಿತ್ತು.
ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಆತಿಥ್ಯದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕಾಂಗ್ರೆಸ್ ಅಲ್ಲದೆ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್, ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪಟ್ನಾದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ‘ನಿತೀಶ್ ಕುಮಾರ್ ಅವರು ಬಿಜೆಪಿ ವಿರುದ್ದ ಪ್ರತಿಪಕ್ಷಗಳು ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆ ಮಾಡಲಿದ್ದಾರೆ.
ಪ್ರತಿಪಕ್ಷಗಳ ಮತಗಳನ್ನು ಕ್ರೋಢೀಕರಿಸಲು ಇದುವೇ ಏಕೈಕ ಮಾರ್ಗವಾಗಿದೆ. ಪಂಜಾಬ್,ಕೇರಳ, ಪಶ್ಚಿಮಬಂಗಾಳದಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಡೆ ಈ ಸೂತ್ರವು ಪ್ರತಿಪಕ್ಷಗಳಿಗೆ ಪ್ರಯೋಜನವಾಗಲಿದೆ. ಎಲ್ಲಾ ಸಮಾನಮನಸ್ಕ ಪಕ್ಷಗಳು ತಮ್ಮ ಚಿಂತನೆಗಳನ್ನು ಚರ್ಚಿಸಲು ಈ ಸಭೆಯು ವೇದಿಕೆಯಾಗಲಿದೆ ಎಂದರು.
ತೀವ್ರವಾದ ಕೋಮುಧ್ರುವೀಕರಣ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾಸಂಸ್ಥೆಗಳ ಕಿರುಕುಳ ಹಾಗೂ ಜಾತಿ ಗಣತಿಯ ಅವಶ್ಯಕತೆ ಇವುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹಿರಿಯ ಪ್ರತಿಪಕ್ಷ ನಾಯಕರೊಬ್ಬರು ತಿಳಿಸಿದ್ದಾರೆ.
ದೇಶಾದ್ಯಂತ 450 ಕ್ಷೇತ್ರಗಳಲ್ಲಿ ನೇರಸ್ಪರ್ಧೆಯೇರ್ಪಡುವಂತೆ ಮಾಡಲು ಪ್ರತಿಪಕ್ಷಗಳು ಶ್ರಮಿಸಬೇಕೆಂದು ನಿತೀಶ್ ಕುಮಾರ್ ಹಾಗೂ ಲಾಲುಪ್ರಸಾದ್ ಸಭೆಯಲ್ಲಿ ಆಗ್ರಹಿಸಲಿದ್ದಾರೆ. ‘‘ನಾವು ನಮ್ಮ ಮನೆಗೆಲಸ ನಿರ್ವಹಿಸಿದ್ದೇವೆ. ಮಮತಾ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್ ಮತ್ತಿತರ ಹಿರಿಯ ನಾಯಕರುಗಳು ಕೂಡಾ ಈ ಚಿಂತನೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ ಈಗ ಕಾಂಗ್ರೆಸ್ ಪಕ್ಷವು ಹಲವಾರು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದರಿಂದ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಾವು ಕಾಂಗ್ರೆಸ್ ಜೊತೆಗೆ ಒಪ್ಪಂದ ವೇರ್ಪಡಿಸಬೇಕಾಗಿದೆ’’ ಎಂದು ಹಿರಿಯ ಆರ್‌ಜೆಡಿ ನಾಯಕರೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್ ಅವರು ಪ್ರತಿಪಕ್ಷಗಳಿಗೆ ಪತ್ರವೊಂದನ್ನು ಬರೆದಿದ್ದು, ದಿಲ್ಲಿಯ ಕುರಿತಾದ ಕೇಂದ್ರ ಸರಕಾರದ ಸುಗ್ರೀವಾಜ್ಞೆಯು ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯ ಮುಖ್ಯ ಕಾರ್ಯಸೂಚಿಯಾಗಿರಬೇಕೆಂದು ಆಗ್ರಹಿಸಿದ್ದಾರೆ.







