ಬೌಲರ್ಗಳ ರ್ಯಾಂಕಿಂಗ್ಸ್: ಅಗ್ರ ಸ್ಥಾನ ಕಾಯ್ದುಕೊಂಡ ಅಶ್ವಿನ್
ದುಬೈ: ಬುಧವಾರ ಬಿಡುಗಡೆಗೊಂಡ ಹೊಸ ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್ನಲ್ಲಿ, ಬೌಲರ್ಗಳ ವಿಭಾಗದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಅದೇ ವೇಳೆ, ಬ್ಯಾಟಿಂಗ್ ವಿಭಾಗದಲ್ಲಿ, ಇಂಗ್ಲೆಂಡ್ನ ಜೋ ರೂಟ್ ಆಸ್ಟ್ರೇಲಿಯದ ಮಾರ್ನಸ್ ಲಾಬುಶಾನ್ರನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವ ಅವಕಾಶ ದೊರೆಯದಿದ್ದರೂ, 860 ಅಂಕಗಳನ್ನು ಹೊಂದಿರುವ ಅಶ್ವಿನ್ ತನ್ನ ನಂಬರ್ ವನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ 829 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಇದ್ದಾರೆ.
ಭಾರತೀಯ ಬೌಲರ್ಗಳ ಪೈಕಿ, 772 ಅಂಕಗಳನ್ನು ಹೊಂದಿರುವ ಜಸ್ಪೀತ್ ಬುಮ್ರಾ 8ನೇ ಸ್ಥಾನದಲ್ಲಿದ್ದರೆ, 765 ಅಂಕಗಳೊಂದಿಗೆ ರವೀಂದ್ರ ಜಡೇಜ 9ನೇ ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ, ವಿರಾಟ್ ಕೊಹ್ಲಿ ಒಂದು ಸ್ಥಾನ ಕೆಳಗೆ ಜಾರಿ 14ನೇ ಸ್ಥಾನವನ್ನು ಪಡೆದರೆ, ನಾಯಕ ರೋಹಿತ್ ಶರ್ಮಾ 12ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ್ ಪೂಜಾರ ತನ್ನ 25ನೇ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ತಲಾ ಒಂದು ಸ್ಥಾನ ಮೇಲೇರಿ ಕ್ರಮವಾಗಿ 36 ಮತ್ತು 37ನೇ ಸ್ಥಾನಗಳಲ್ಲಿದ್ದಾರೆ.
ವಿಕೆಟ್ಕೀಪರ್ ಬ್ಯಾಟರ್ ರಿಶಭ್ ಪಂತ್ ಅಗ್ರ 10ರಲ್ಲಿರುವ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.







