ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆ ಮಾಡಿದ ಆರೋಪ: ಬಿಹಾರದ ವ್ಯಕ್ತಿಯ ಬಂಧನ
ಹೊಸದಿಲ್ಲಿ: ಟೆಲಿಗ್ರಾಮ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಕೋವಿನ್ ಪೋರ್ಟಲ್ ನಿಂದ ಡೇಟಾವನ್ನು ಸೋರಿಕೆ ಮಾಡಿದ ಆರೋಪದ ಮೇಲೆ ದಿಲ್ಲಿ ಪೊಲೀಸ್ ವಿಶೇಷ ಘಟಕವು ಬಿಹಾರದಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ ಹಾಗೂ ಆತನಿಗೆ ಸಹಾಯ ಮಾಡಿದ್ದಕ್ಕಾಗಿ ಇನ್ನೂ ಒಬ್ಬರನ್ನು ಬಂಧಿಸಿದೆ ಎಂದು The Indian Express ವರದಿ ಮಾಡಿದೆ.
ಆರೋಪಿಯನ್ನು ಆತನ ನಿವಾಸದಿಂದಲೇ ಬಂಧಿಸಲಾಗಿದೆ . ಆರೋಪಿಯ ತಾಯಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವ್ಯಕ್ತಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟೆಲಿಗ್ರಾಮ್ನಲ್ಲಿ ಸೋರಿಕೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು NDTV ಗೆ ತಿಳಿಸಿವೆ.
ಆ ವ್ಯಕ್ತಿ, ಕೋವಿನ್ ಪೋರ್ಟಲ್ನಿಂದ ಡೇಟಾವನ್ನು ಸಂಗ್ರಹಿಸಲು ಆರೋಗ್ಯ ಕಾರ್ಯಕರ್ತೆಯಾಗಿರುವ ತನ್ನ ತಾಯಿಯ ಸಹಾಯವನ್ನು ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ.
ಸೋರಿಕೆಯಾದ ಡೇಟಾವು ಆಧಾರ್, ವೋಟರ್ ಐಡಿ, ಪಾಸ್ಪೋರ್ಟ್ ಸಂಖ್ಯೆಗಳು ಮತ್ತು ಕೋವಿಡ್ -19 ಲಸಿಕೆಗಳನ್ನು ಪಡೆದವರ ಸೆಲ್ಫೋನ್ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ಸೌತ್ ಈಸ್ಟ್ ಏಶ್ಯ ಇಂಡೆಕ್ಸ್ ಟ್ವೀಟ್ ಮಾಡಿತ್ತು.
ಡೇಟಾ ಉಲ್ಲಂಘನೆಯ ಸುದ್ದಿಯನ್ನು ಈ ತಿಂಗಳ ಆರಂಭದಲ್ಲಿ ನ್ಯೂಸ್ ಪೋರ್ಟಲ್ ಸೌತ್ ಏಷ್ಯಾ ಇಂಡೆಕ್ಸ್ ಸರಣಿ ಟ್ವೀಟ್ ಗಳ ಮೂಲಕ ಹೊರಗೆಡಹಿತ್ತು.
ಕೋವಿನ್ ಪೋರ್ಟಲ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದ್ದ ಕೇಂದ್ರ ಸರಕಾರವು ವರದಿಯನ್ನು ತಳ್ಳಿಹಾಕಿತ್ತು.