ಉ.ಪ್ರ.: ಮಹಿಳೆ ಅನುಮಾನಾಸ್ಪದ ಸಾವು; ಪೊಲೀಸ್ ಸಿಬ್ಬಂದಿಯಿಂದ ನಿರಂತರ ಕಿರುಕುಳ ಎಂದ ಕುಟುಂಬ
ಇಟಾವಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾವಾದಲ್ಲಿ ಬುಧವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದೊಂದಿಗೆ ಕುಟುಂಬಸ್ಥರು ಪೂತನ್ ಸಕ್ರೌಲಿ ಸಿವಿಲ್ ಲೈನ್ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದರು.
ಕೆಲ ಪೊಲೀಸ್ ಸಿಬ್ಬಂದಿಯಿಂದ ಮಹಿಳೆ ನಿರಂತರ ಕಿರುಕುಳ ಅನುಭವಿಸುತ್ತಿದ್ದು, ಆಕೆಯ ಸಾವಿಗೆ ಕಿರುಕುಳವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ನಂತರ ಕುಟುಂಬ ಸದಸ್ಯರು ರಸ್ತೆ ತಡೆ ನಿಲ್ಲಿಸಿದರು.
"ಜೂ.6ರಂದು ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಮಹಿಳೆ ನಡುವೆ ವಾಗ್ವಾದ ನಡೆದಿದ್ದು, ಮಹಿಳೆ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ಘಟನೆಯ ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ. ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಮ್ಮ ಭರವಸೆಯಿಂದ ಕುಟುಂಬ ತೃಪ್ತವಾಗಿದೆ’’ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಕಪಿಲ್ದೇವ್ ಸಿಂಗ್ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪ ಹೊರಿಸಿ ಪೊಲೀಸರು ನಮ್ಮಿಂದ ಲಂಚ ಕೇಳಿದ್ದಾರೆ. ಪೊಲೀಸ್ ಸಿಬ್ಬಂದಿ ನಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ಸಪ್ನಾ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆಕೆ ತುಂಬಾ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.