ಉಪ್ಪಿನಂಗಡಿ: ಖಾತೆ ಬದಲಾವಣೆಗೆ ಲಂಚ; ಕೌಕ್ರಾಡಿ ಗ್ರಾ.ಪಂ. ಪಿಡಿಒ ಮಹೇಶ್ ಲೋಕಾಯುಕ್ತರ ಬಲೆಗೆ

ಉಪ್ಪಿನಂಗಡಿ: ಖಾತೆ ಬದಲಾವಣೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಂಚ ಸ್ವೀಕರಿಸುವ ಸಂದರ್ಭ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಕೌಕ್ರಾಡಿ ಗ್ರಾ.ಪಂ. ನಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಕೊಕ್ಕಡ ಗ್ರಾಮದ ವ್ಯಕ್ತಿಯೋರ್ವರು ಕೌಕ್ರಾಡಿಯ ತಮ್ಮ ಜಮೀನಿನ 9/11ನ ಖಾತೆ ಬದಲಾವಣೆಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು 2017ರಲ್ಲಿ ಕೌಕ್ರಾಡಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿನ ಖಾತೆ ಬದಲಾವಣೆಯಾಗದಿರುವುದರಿಂದ 2021ರಲ್ಲಿ ಮತ್ತೆ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಆದರೂ ಅವರ ಜಮೀನಿನ ಖಾತೆ ಬದಲಾವಣೆಯಾಗಿರಲಿಲ್ಲ. ಈ ಬಗ್ಗೆ ಕೌಕ್ರಾಡಿ ಗ್ರಾ.ಪಂ.ಗೆ ಹೋಗಿ ವಿಚಾರಿಸಿದಾಗ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಯಾದ ಮಹೇಶ್ ಜಿ.ಎನ್. ಅವರು ಖಾತೆ ಬದಲಾವಣೆ ಮಾಡಲು 20,000 ರೂ. ಲಂಚದ ಬೇಡಿಕೆಯಿಟ್ಟಿದ್ದರು. ಅರ್ಜಿ ಸಲ್ಲಿಸಿದ ವ್ಯಕ್ತಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಜೂ. 22ರಂದು ಪಿಡಿಒ ಮಹೇಶ್ ಅವರು ಲಂಚದ ಹಣ ಸ್ವೀಕರಿಸುವಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಉಪಾಧೀಕ್ಷಕರಾದ ಕಲಾವತಿ, ಚೆಲುವರಾಜು ಬಿ., ಹಾಗೂ ಪೊಲೀಸ್ ನಿರೀಕ್ಷಕ ಅಮಾನುಲ್ಲಾ, ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





