ಮಂಗಳೂರು: ಖುರ್ಬಾನಿಗೆ ಅಡೆತಡೆಯಾಗದಂತೆ ಬಂದೋಬಸ್ತ್ ನೀಡಲು ಮನವಿ

ಮಂಗಳೂರು: ರಾಜ್ಯಾದ್ಯಂತ ಜೂ.29ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಪ್ರಯುಕ್ತ ನಡೆಸಲಾಗುವ ಖುರ್ಬಾನಿಗೆ ಯಾವುದೇ ಅಡೆತಡೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ, ದ.ಕ. ಜಿಲ್ಲಾಧಿಕಾರಿಗೆ, ಮಂಗಳೂರು ಪೊಲೀಸ್ ಆಯುಕ್ತರಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.
ಮುಸ್ಲಿಮರು ಜೂ.29ರಂದು ಬಕ್ರೀದ್ ಆಚರಿಸಲಿದ್ದಾರೆ. ಅಂದು ಹಾಗೂ ನಂತರದ ಮೂರು ದಿನಗಳವರೆಗೆ ಖುರ್ಬಾನಿಯ ಸಂಪ್ರದಾಯವಿದೆ. ಈ ಕಡ್ಡಾಯ ಧಾರ್ಮಿಕ ಕಾರ್ಯಕ್ಕೆ ಯಾವುದೇ ರೀತಿಯ ಅಡೆತಡೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕೆಂದು ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಸೂಚನೆಯಂತೆ ಮನವಿ ಸಲ್ಲಿಸಲಾಯಿತು.
ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಮುಸ್ತಫಾ, ಡಿ.ಎಂ. ಅಸ್ಲಂ, ಸಿ.ಎಂ. ಹನೀಫ್, ಎಂ.ಎ. ಅಶ್ರಫ್, ಸದಸ್ಯರಾದ ಹಾಜಿ ಅಬ್ದುಲ್ ಸಮದ್, ಫಕೀರಬ್ಬ ಮಾಸ್ಟರ್ ನಿಯೋಗದಲ್ಲಿದ್ದರು.





