ದ.ಕ.ಜಿಲ್ಲೆ : ಕ್ಷೀಣಿಸಿದ ಮುಂಗಾರು ಮಳೆ

ಮಂಗಳೂರು, ಜೂ.22: ದ.ಕ.ಜಿಲ್ಲೆಯಲ್ಲಿ ಗುರುವಾರವೂ ಮುಂಗಾರು ಕ್ಷೀಣಿಸಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. ಮಳೆ ಕ್ಷೀಣಿಸಿದ ಕಾರಣ ನಗರ ಸಹಿತ ಕೆಲವು ಕಡೆ ನೀರಿನ ಅಭಾವ ತಲೆದೋರಿದೆ. ಆಗಾಗ ವಿದ್ಯುತ್ ಕೂಡ ಕೈಕೊಡುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.
ಗುರುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 2.8 ಮಿಮಿ, ಬೆಳ್ತಂಗಡಿಯಲ್ಲಿ 51.2ಮಿಮಿ, ಮಾಣಿ, ಉಪ್ಪಿನಂಗಡಿ, ಧರ್ಮಸ್ಥಳದಲ್ಲಿ 22.1 ಮಿಮಿ., ಪಣಂಬೂರು 14.7ಮಿ.ಮಿ ಮಳೆಯಾಗಿದೆ. ಕರಾವಳಿಯಲ್ಲಿ ಸರಾಸರಿ 32.2 ಡಿಗ್ರಿ ಗರಿಷ್ಠ, 25.1 ಕನಿಷ್ಟ ಉಷ್ಣಾಂಶ ದಾಖಲಾಗಿದೆ.
ಶುಕ್ರವಾರ ಬೆಳಗ್ಗಿನಿಂದಲೇ ಆಗಾಗ ಮೋಡಕವಿದ ವಾತಾವರಣವಿದ್ದು, ದಿನಪೂರ್ತಿ ಅಲ್ಲಲ್ಲಿ ಸಾಧಾರಣ ಮಳೆ, ಬಿಸಿಲು ಸಹಿತ ಮೋಡ ಮುಂದುವರಿಯಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯಾ ಗುವ ಸಾಧ್ಯತೆ ಇದೆ. ಗ್ರಾಮಾಂತರ ಪ್ರದೇಶದ ಅನೇಕ ಕಡೆಗಳಲ್ಲಿ ಬಿಸಿಲು ಸಹಿತ ಮಳೆಹನಿಯ ವಾತಾವರಣ ಕಂಡುಬಂದರೆ, ಪಶ್ಚಿಮ ಘಟ್ಟದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.