ಸ್ಪೆಷಲ್ ಒಲಿಂಪಿಕ್ಸ್ ಜಾಗತಿಕ ಕ್ರೀಡಾಕೂಟ: ಪವರ್ ಲಿಫ್ಟಿಂಗ್‌ನಲ್ಲಿ ಹರೀಶ್‌ಗೆ 3 ಚಿನ್ನ, ಬೆಳ್ಳಿಯ ಪದಕ

ಮಂಗಳೂರು, ಜೂ.22: ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ಜಾಗತಿಕ ಕ್ರೀಡಾಕೂಟ-2023ರ ಪವರ್ ಲಿಫ್ಟಿಂಗ್‌ನಲ್ಲಿ ಭಾಗವಹಿಸಿದ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ವಿಶೇಷ ಮಕ್ಕಳ ಶಾಲೆಯ ಕ್ರೀಡಾಪಟು ಹರೀಶ್ ವಿ. ಅವರು 3 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದಿದ್ದಾರೆ.
ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಹರೀಶ್ ವಿ. ಅವರು ಮೂಲತಃ ಬೆಂಗಳೂರಿನವರು. 2018ಕ್ಕೆ ಸಾನಿಧ್ಯ ವಸತಿಯುತ ಶಾಲೆಗೆ ಸೇರ್ಪಡೆಗೊಂಡ ಇವರಿಗೆ ಅಂತರಾಷ್ಟ್ರೀಯ ತೀರ್ಪುಗಾರರಾದ ಪ್ರೇಮ್‌ನಾಥ್ ಉಳ್ಳಾಲ್, ಸರಸ್ವತಿ ಪುತ್ರನ್ ಹಾಗೂ ವಿಶಾಲ್ ಅವರು ಪವರ್ ಲಿಫ್ಟಿಂಗ್ ಕ್ರೀಡೆಗೆ ತರಬೇತಿ ನೀಡಿದ್ದಾರೆ.
ಬರ್ಲಿನ್‌ನಲ್ಲಿ ಬುಧವಾರ ನಡೆದ ಅಂತಿಮ ಸುತ್ತಿನ ಪವರ್ ಲಿಫ್ಟಿಂಗ್ ವಿಶ್ವಚಾಂಪಿಯನ್‌ನಲ್ಲಿ ಹರೀಶ್ ಅವರು ಸ್ಕಾಟ್‌ನಲ್ಲಿ 140 ಕೆ.ಜಿ. ಎತ್ತುವ ಮೂಲಕ ಚಿನ್ನ, ಬೆಂಚ್‌ಪ್ರೆಸ್‌ನಲ್ಲಿ 82.5 ಕೆ.ಜಿ.ಯನ್ನು ಎತ್ತಿ ಚಿನ್ನ ಹಾಗೂ ಡೆಡ್‌ಲಿಫ್ಟಿನಲ್ಲಿ 145 ಕೆ.ಜಿ. ಎತ್ತುವ ಮೂಲಕ ಬೆಳ್ಳಿ ಪದಕ ತನ್ನದಾಗಿಸಿದ್ದಾರೆ. ಈ ಮೂರು ವಿಭಾಗದಲ್ಲಿ ಒಟ್ಟು 367.5 ಕೆ.ಜಿ. ಎತ್ತುವುದರ ಮೂಲಕ 3ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.





