ದ.ಕ ಜಿಲ್ಲೆಯಲ್ಲಿ ನರ್ಮ್ ಬಸ್ ಸೇವೆ ಆರಂಭಿಸಲು ಡಿವೈಎಫ್‌ಐ ಮನವಿ

ಮಂಗಳೂರು, ಜೂ.22: ದ.ಕ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸರಕಾರಿ ನರ್ಮ್ ಬಸ್ ಸೇವೆ ಆರಂಭಿಸಲು ಆಗ್ರಹಿಸಿ ಕೆಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ದ.ಕ. ಜಿಲ್ಲಾ ಡಿವೈಎಫ್‌ಐ ಮನವಿ ಸಲ್ಲಿಸಿದೆ.
ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಿರುವ ಡಿವೈಎಫ್‌ಐ ಕರ್ನಾಟಕ ರಾಜ್ಯಾದ್ಯಂತ ಸರಕಾರಿ ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಭಾಗ್ಯ ಜಾರಿಗೊಳಿಸಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಸರಕಾರಿ ಕೆಎಸ್‌ಆರ್ಟಿಸಿ ಬಸ್‌ಗಳನ್ನು ಕೊರೋನ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಪ್ರಯಾಣಿಕರು ಬಹಳಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಮಾತ್ರವಲ್ಲ ಈಗ ಮಹಿಳೆಯರು ಸರಕಾರದ ಈ ಸೌಲಭ್ಯ ದಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ನರ್ಮ್ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 68 ರಷ್ಟು ಸರಕಾರಿ ಕೆಎಸ್‌ಆರ್ ಟಿಸಿ ನಗರ ಸಾರಿಗೆ ಬಸ್‌ಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಆದರೆ ಮಂಜೂರಾದ ಬಸ್‌ಗಳ ಪೈಕಿ 18 ಬಸ್‌ಗಳಿಗೆ ನಗರದ ಸ್ಟೇಟ್ ಬ್ಯಾಂಕ್ ನಿಲ್ದಾಣ ಪ್ರವೇಶಿಸಲು ಅವಕಾಶ ಕಲ್ಪಿಸಿತ್ತು. ಬಾಕಿ ಉಳಿದ ಬಸ್‌ಗಳು ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು ಆರ್‌ಟಿಎ ಪ್ರಾಧಿಕಾರ ಸಭೆ ಒಪ್ಪಿಗೆ ನೀಡಿತ್ತು.ಆ ಸಂದರ್ಭ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿ ಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ಖಾಸಗೀ ಬಸ್ ಮಾಲಕರ ವಿರೋಧದ ನಡುವೆಯೂ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಅವರ ಜನಪರ ಆಡಳಿತ ನಡೆಯಿಂದ ಸರಕಾರಿ ನರ್ಮ್ ನಗರ ಸಾರಿಗೆ ಬಸ್ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಅದರ ಜೊತೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಂತಹ ಗ್ರಾಮೀಣ ಭಾಗಗಳಿಗೂ ಸರಕಾರಿ ಗ್ರಾಮಾಂತರ ಸಾರಿಗೆ ಬಸ್ ನಿರಂತರ ಸೇವೆಯನ್ನು ನೀಡಿದೆ. ಆದರೆ ಕೋರೋನ ಲಾಕ್‌ಡೌನ್ ಬಳಿಕ ಸರಕಾರಿ ನರ್ಮ್ ನಗರ ಸಾರಿಗೆ ಬಸ್ ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಭಾಗಶಃ ವ್ಯತ್ಯಯ ಉಂಟಾಗಿ ಎಂದು ಹೇಳಿದೆ.
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಭರಾಟೆಯ ನಡುವೆ ಸರಕಾರಿ ಬಸ್‌ಗಳು ಮೂಲೆಗುಂಪಾಗ ತೊಡಗಿದೆ. ಇದ ರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸು ವಂತಾಗಿದೆ. ಜೂನ್ 11 ರಿಂದ ಸರಕಾರ ಪ್ರಕಟಿಸಿದ ಕೆಎಸ್‌ಆಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು. ಸದ್ಯ ಜಿಲ್ಲೆಯಲ್ಲಿ ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂ ಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ ಎಂದು ಡಿವೈಎಫ್ ತಿಳಿಸಿದೆ.
ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಮನೋಜ್ ವಾಂಜೂರು, ಮುಸ್ತಫ, ದೀಪಕ್ ಬಜಾಲ್, ಇಬ್ರಾಹೀಂ ಮದಕ, ಬಶೀರ್ ಜಲ್ಲಿಗುಡ್ಡೆ, ತಯ್ಯೂಬ್ ಬೆಂಗರೆ ಮುಂತಾದವರು ಉಪಸ್ಥಿತರಿದ್ದರು.
ವಿಭಾಗೀಯ ನಿಯಂತ್ರಣಾಧಿಕಾರಿಯ ಪರವಾಗಿ ಮನವಿ ಸ್ವೀಕರಿಸಿದ ಕೆ.ಎಸ್‌ಆರ್‌ಟಿಸಿ ಟ್ರಾಫಿಕ್ ನಿಯಂತ್ರಾಣಾಧಿಕಾರಿ ನಿರ್ಮಲ ಅವರು ಮಂಜೂರಾದ 68 ಬಸ್‌ಗಳಲ್ಲಿ 35 ಈಗಾಗಲೇ ಓಡಾಟ ನಡೆಸುತ್ತಿದೆ. ಸಂಸ್ಥೆಯಲ್ಲಿ ಬಸ್‌ಗಳ ಕೊರತೆಯಿದ್ದು ಹೆಚ್ಚುವರಿ ಬಸ್‌ಗಳ ಆವಶ್ಯಕತೆ ಇರುವುದರಿಂದ ಆ ಕೊರತೆ ನೀಗಿಸಲು ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಹಿಂದೆ ಮಂಜೂರಾಗಿ ಓಡಾಟ ನಡೆಸದೆ ಇರುವ ಪ್ರದೇಶಗಳಿಗೆ ಶೀಘದಲ್ಲೇ ಬಸ್ ಸಂಚಾರ ಸೇವೆ ಪ್ರಾರಂಭಗೊಳ್ಳಲಿದೆ ಎಂದು ಈ ವೇಳೆ ತಿಳಿಸಿದರು.