ಕಾಂಗ್ರೆಸ್ ನಮಗೆ ಬೆಂಬಲ ನೀಡದಿದ್ದರೆ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸುವುದಿಲ್ಲ: ಆಪ್

ಹೊಸದಿಲ್ಲಿ: ದಿಲ್ಲಿಯ ಆಡಳಿತಾತ್ಮಕ ಸೇವೆಗಳನ್ನು ತನ್ನ ಕೈಗೆ ತೆಗೆದುಕೊಳ್ಳುವ ಕೇಂದ್ರ ಸರಕಾರದ ವಿವಾದಿತ ಅಧ್ಯಾದೇಶದ ವಿರುದ್ಧದ ತನ್ನ ಅಭಿಯಾನಕ್ಕೆ ಕಾಂಗ್ರೆಸ್ ಬೆಂಬಲ ನೀಡದಿದ್ದರೆ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಎಚ್ಚರಿಸಿದೆ.
ಇದು 2024ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರತಿಪಕ್ಷಗಳ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ.
‘‘ದಿಲ್ಲಿ ಅಧ್ಯಾದೇಶದ ವಿಷಯದಲ್ಲಿ ಕಾಂಗ್ರೆಸ್ ನಮಗೆ ಬೆಂಬಲ ನೀಡಬೇಕು. ಅದು ಬೆಂಬಲ ನೀಡದಿದ್ದರೆ ನಾವು ಪ್ರತಿಪಕ್ಷಗಳ ಸಭೆಯನ್ನು ಬಹಿಷ್ಕರಿಸುತ್ತೇವೆ ಮತ್ತು ಭವಿಷ್ಯದ ಪ್ರತಿಪಕ್ಷ ಸಭೆಗಳಿಂದಲೂ ದೂರ ಉಳಿಯುತ್ತೇವೆ’’ ಎಂದು ಆಪ್ನ ಮೂಲವೊಂದು ತಿಳಿಸಿದೆ.
ಅಧ್ಯಾದೇಶಕ್ಕೆ ಸಂಬಂಧಿಸಿ ಕಾಂಗ್ರೆಸ್ ತನ್ನ ನಿಲುವನ್ನು ಪ್ರತಿಪಕ್ಷಗಳ ಸಭೆಯಲ್ಲಿ ಸ್ಪಷ್ಟಪಡಿಸುವುದು ಎಂಬ ನಿರೀಕ್ಷೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ವ್ಯಕ್ತಪಡಿಸಿದ್ದರು. ಅಧ್ಯಾದೇಶವು ಸಂಸತ್ನಲ್ಲಿ ಕಾನೂನಾಗುವುದನ್ನು ತಡೆಯಲು ಅವರು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ.
ಆಪ್ನ ಪ್ರಬಲ ವಿರೋಧಿಗಳ ಪೈಕಿ ಒಬ್ಬರಾಗಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ‘‘ಕೇಜ್ರಿವಾಲ್ ಜಿ, ನಿಮ್ಮ ಅನುಪಸ್ಥಿತಿಯನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀವು ಪ್ರತಿಪಕ್ಷಗಳ ಸಭೆಯಿಂದ ಹೊರಗುಳಿಯಲು ನೆವ ಹುಡುಕುತ್ತಿದ್ದಿರಿ... ಈ ಸಭೆಯು ವ್ಯವಹಾರ ಮಾಡಿಕೊಳ್ಳುವವರಿಗಲ್ಲ’’ ಎಂದು ಹೇಳಿದ್ದಾರೆ.







