ಚೀನಾದ ಹೋಟೆಲ್ ನಲ್ಲಿ ಅಡುಗೆ ಗ್ಯಾಸ್ ಸ್ಫೋಟ: ಕನಿಷ್ಟ 31 ಮಂದಿ ಮೃತ್ಯು

ಬೀಜಿಂಗ್: ವಾಯವ್ಯ ಚೀನಾದ ಯಿಂಚುವಾನ್ ನಗರದಲ್ಲಿನ ರೆಸ್ಟಾರೆಂಟ್ ನಲ್ಲಿ ಅಡುಗೆ ಅನಿಲ ಸ್ಫೋಟಗೊಂಡು ಕನಿಷ್ಟ 31 ಮಂದಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ‘ಕ್ಸಿನ್ಹುವಾ’ ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.
ಯಿಂಚುವಾನ್ ನಗರದ ಹೊರವಲಯದ ವಸತಿ ಪ್ರದೇಶದಲ್ಲಿರುವ ಫುಯಾಂಗ್ ರೆಸ್ಟಾರೆಂಟ್ನಲ್ಲಿ ಬುಧವಾರ ರಾತ್ರಿ ಎಲ್ಪಿಜಿ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಡ್ರ್ಯಾಗನ್ ಬೋಟ್ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನ ರಜೆಯಿದ್ದ ಕಾರಣ ರೆಸ್ಟಾರೆಂಟ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು. ಸ್ಫೋಟದಿಂದ ಕನಿಷ್ಟ 31 ಮಂದಿ ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿದೆ.
ಸ್ಫೋಟದ ಮಾಹಿತಿ ಲಭಿಸಿದೊಡನೆ 20 ಅಗ್ನಿಶಾಮಕ ಯಂತ್ರ ಹಾಗೂ 100ಕ್ಕೂ ಅಧಿಕ ಸಿಬಂದಿಗಳನ್ನು ಸ್ಥಳಕ್ಕೆ ರವಾನಿಸಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
Next Story