ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯ: ನೇಪಾಳದ ವಿರುದ್ಧ ವಿಂಡೀಸ್‌ಗೆ ಭರ್ಜರಿ ಜಯ
ಶೈ ಹೋಪ್, ನಿಕೊಲಸ್ ಪೂರನ್ ಶತಕ

ಹರಾರೆ, ಜೂ.22: ಶೈ ಹೋಪ್(132 ರನ್, 129 ಎಸೆತ)ಹಾಗೂ ನಿಕೊಲಸ್ ಪೂರನ್(115 ರನ್, 94 ಎಸೆತ)ಶತಕದ ಸಹಾಯದಿಂದ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ನೇಪಾಳ ವಿರುದ್ಧ ವಿಶ್ವಕಪ್ ಅರ್ಹತಾ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ 101 ರನ್ ಅಂತರದಿಂದ ಗೆಲುವು ದಾಖಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. 55 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವಿಂಡೀಸ್ ಆರಂಭ ಉತ್ತಮವಾಗಿರಲಿಲ್ಲ. ಆಗ ಜೊತೆಯಾದ ಶತಕವೀರರಾದ ಹೋಪ್ ಹಾಗೂ ಪೂರನ್ 4ನೇ ವಿಕೆಟ್‌ಗೆ 216 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಗೆಲ್ಲಲು 340 ರನ್ ಗುರಿ ಪಡೆದಿದ್ದ ನೇಪಾಳ ತಂಡ ಜೇಸನ್ ಹೋಲ್ಡರ್(3-34) ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿ 49.4 ಓವರ್‌ಗಳಲ್ಲಿ 238 ರನ್‌ಗೆ ಆಲೌಟಾಯಿತು. ನೇಪಾಳದ ಪರ ಆರಿಫ್ ಶೇಕ್(63 ರನ್)ಅರ್ಧಶತಕ ಗಳಿಸಿದರು. ಗುಲ್ಶನ್ ಜಾ 42 ರನ್, ನಾಯಕ ರೋಹಿತ್ ಪೌದೆಲ್ 30 ರನ್, ಆಸಿಫ್ ಶೇಕ್ ಹಾಗೂ ಕರನ್ ತಲಾ 28 ರನ್ ಗಳಿಸಿದರು.
ವಿಂಡೀಸ್ ಪರ ಅಲ್ಝಾರಿ ಜೋಸೆಫ್(2-45), ಅಕೀಲ್ ಹುಸೇನ್(2-49) ಹಾಗೂ ಕೀಮೊ ಪಾಲ್(2-63) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.