ತೈಪೆ ಓಪನ್: ಪ್ರಣಯ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ತೈಪೆ, ಜೂ.22: ಭಾರತದ ಅಗ್ರ ರ‌್ಯಾಂಕ್ ನ ಪುರುಷರ ಸಿಂಗಲ್ಸ್ ಆಟಗಾರ ಎಚ್.ಎಸ್. ಪ್ರಣಯ್ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಇಂಡೋನೇಶ್ಯದ ಟೊಮಿ ಸುಗಿಯಾರ್ಟೊರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಪ್ರಣಯ್ ಕೇವಲ 36 ನಿಮಿಷಗಳಲ್ಲಿ ಕೊನೆಗೊಂಡ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸುಗಿಯಾರ್ಟೊ ವಿರುದ್ಧ 21-9, 21-7 ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಪ್ರಣಯ್ ಅಂತಿಮ-8ರ ಹಂತದಲ್ಲಿ ಹಾಂಕಾಂಗ್‌ನ ಐದನೇ ಶ್ರೇಯಾಂಕದ ಅಂಗುಸ್ ಕಾ ಲಾಂಗ್‌ರನ್ನು ಎದುರಿಸಲಿದ್ದಾರೆ.
ಪ್ರಣಯ್ ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರಣಯ್ ಕಳೆದ ತಿಂಗಳು ಮಲೇಶ್ಯ ಮಾಸ್ಟರ್ಸ್ ಸೂಪರ್-300 ಪ್ರಶಸ್ತಿಯನ್ನು ಜಯಿಸಿದ್ದರು. ಇಂಡೋನೇಶ್ಯ ಓಪನ್‌ನಲ್ಲಿ ಸೆಮಿ ಫೈನಲ್ ತಲುಪುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು. ಸೆಮಿ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಶ್ವದ ನಂ.1 ಆಟಗಾರ ವಿಕ್ಟರ್ ಎಕ್ಸೆಲ್‌ಸನ್ ವಿರುದ್ಧ ಸೋತಿದ್ದರು.
ಮತ್ತೊಂದೆಡೆ, ಪಾರುಪಲ್ಲಿ ಕಶ್ಯಪ್ ಸ್ಥಳೀಯ ಫೇವರಿಟ್ ಆಟಗಾರ ಸು ಲಿ ಯಾಂಗ್ ವಿರುದ್ಧ 16-21, 17-21 ಅಂತರದಿಂದ ಸೋತಿದ್ದಾರೆ.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸಿಕ್ಕಿ ರೆಡ್ಡಿ ಹಾಗೂ ರೋಹನ್ ಕಪೂರ್ ತೈಪೆಯ ಚಿಯು ಸಿಯಾಂಗ್ ಹಾಗೂ ಲಿನ್ ಕ್ಸಿಯಾವೊ ಮಿನ್ ವಿರುದ್ಧ 13-21, 18-21 ಅಂತರದಿಂದ ಸೋಲುಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ತನ್ಯಾ ಕಾಮತ್ ಟೂರ್ನಮೆಂಟ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ.