ಜಾಗತಿಕ ಶಾಂತಿಗಾಗಿ ಕೆಲಸ ಮಾಡಲು ಭಾರತ-ಅಮೆರಿಕ ಬದ್ಧ: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್: ಜಾಗತಿಕ ಶಾಂತಿಗಾಗಿ ಕಾರ್ಯನಿರ್ವಹಿಸಲು ಭಾರತ-ಅಮೆರಿಕ ಬದ್ಧವಾಗಿದೆ. ಎರಡೂ ದೇಶಗಳ ಸಮಾಜಗಳು ಮತ್ತು ಸಂಸ್ಥೆಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿವೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕ ಪ್ರವಾಸದ ಎರಡನೇ ದಿನ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ರನ್ನು ಭೇಟಿಯಾದ ಸಂದರ್ಭ ತಮಗೆ ನೀಡಿದ ಭವ್ಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಮೋದಿ, ಇದು ಭಾರತದ 1.4 ಶತಕೋಟಿ ಜನರಿಗೆ, ಅಮೆರಿಕದಲ್ಲಿರುವ 4 ದಶಲಕ್ಷ ಭಾರತೀಯ ಸಮುದಾಯಕ್ಕೆ ಸಂದ ಗೌರವ ಮತ್ತು ಹೆಮ್ಮೆಯಾಗಿದೆ . ಎರಡೂ ದೇಶಗಳ ನಡುವಿನ ಸೌಹಾರ್ದ ಸಂಬಂಧದ ಸಂಕೇತವಾಗಿದೆ ಎಂದರು.
ಭಾರತೀಯ ಸಮುದಾಯದ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದ ಮೂಲಕ ಅಮೆರಿಕದಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಇವರು ಎರಡೂ ದೇಶಗಳ ನಡುವಿನ ಸಂಬಂಧದ ನಿಜವಾದ ಶಕ್ತಿಯಾಗಿದ್ದಾರೆ. ಈ ಗೌರವವನ್ನು ಅವರಿಗೆ ಒದಗಿಸಿದ್ದಕ್ಕೆ ಬೈಡನ್ ಮತ್ತು ಅವರ ಪತ್ನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು. ಉಭಯ ದೇಶಗಳ ಸಂವಿಧಾನವೂ ‘ನಾವು.. ಜನರು’ ಎಂಬ ಪದದೊಂದಿಗೆ ಆರಂಭವಾಗುತ್ತದೆ. ನಾವಿಬ್ಬರೂ ‘ಎಲ್ಲರ ಹಿತಾಸಕ್ತಿ.. ಎಲ್ಲರ ಕಲ್ಯಾಣ’ ಎಂಬ ಮೂಲಭೂತ ತತ್ವದಲ್ಲಿ ನಂಬಿಕೆ ಇರಿಸಿದ್ದೇವೆ.
ಬಳಿಕ ಮಾತನಾಡಿದ ಬೈಡನ್ ‘ಅಮೆರಿಕ-ಭಾರತದ ಸಂಬಂಧ 21ನೇ ಶತಮಾನದ ಅತ್ಯಂತ ನಿರ್ಣಾಯಕ ಸಂಬಂಧಗಳಲ್ಲಿ ಒಂದಾಗಿದೆ’ ಎಂದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಅವರ ಪತಿ ಡಗ್ಲಾಸ್ ಎಮ್ಹೋಫ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬುಧವಾರ ಬೈಡನ್ ಮತ್ತವರ ಪತ್ನಿ ಜಿಲ್ ಬೈಡನ್ ಶ್ವೇತಭವನದಲ್ಲಿ ಮೋದಿ ಗೌರವಾರ್ಥ ಔತಣಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭ ಹಲವು ಮಹತ್ವದ ವಿಷಯಗಳ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದರು ಎಂದು ವರದಿಯಾಗಿದೆ.
ಬೆಂಗಳೂರು, ಅಹ್ಮದಾಬಾದ್ ನಲ್ಲಿ ಅಮೆರಿಕದ ಕಾನ್ಸುಲೇಟ್ ಆರಂಭಕ್ಕೆ ಒಪ್ಪಂದ
ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಈ ಸಂದರ್ಭ ರಕ್ಷಣಾ ಕಾರ್ಯಕ್ರಮ, ಬಾಹ್ಯಾಕಾಶ ಯಾತ್ರೆ, ವೀಸಾ ನಿಯಮ ಸೇರಿದಂತೆ ಹಲವು ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮೋದಿ ಅಮೆರಿಕ ಭೇಟಿಯ ಎರಡನೇ ದಿನವಾದ ಗುರುವಾರದ ಕೆಲವು ಮಹತ್ವದ ಬೆಳವಣಿಗಳ ವಿವರ:
► ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪೂರಕವಾದ ಕ್ರಮವೊಂದರಲ್ಲಿ ಭಾರತದ ವಾಯುಪಡೆಗೆ ಅಗತ್ಯವಿರುವ ಯುದ್ಧವಿಮಾನದ ಇಂಜಿನ್ಗಳನ್ನು ಭಾರತದಲ್ಲಿ ತಯಾರಿಸಲು ಸರಕಾರಿ ಸ್ವಾಮ್ಯದ ಎಚ್ಎಎಲ್ ಜತೆಗೂಡುವುದಾಗಿ ಅಮೆರಿಕದ ‘ಜನರಲ್ ಇಲೆಕ್ಟ್ರಿಕ್ಸ್’ನ ಏರೋಸ್ಪೇಸ್ ವಿಭಾಗ ಘೋಷಿಸಿದೆ.
► ಭಾರತ ಮತ್ತು ಅಮೆರಿಕ ರಾಜತಾಂತ್ರಿಕ ಸಂಬಂಧಗಳಲ್ಲಿ ದೊಡ್ಡ ಹೆಜ್ಜೆಯಿಟ್ಟಿದ್ದು ಎಚ್-1ಬಿ ವೀಸಾ ಪ್ರಕ್ರಿಯೆ ಬದಲಾವಣೆ ಗೆ ಮತ್ತು ಹೊಸ ಕಾನ್ಸುಲೇಟ್ ಕಚೇರಿ ಆರಂಭಿಸಲು ನಿರ್ಧಾರ.
► ಭಾರತ ಈಗ ಅಮೆರಿಕದಲ್ಲಿ ಐದು ಕಾನ್ಸುಲೇಟ್ ಕಚೇರಿಯನ್ನು ಹೊಂದಿದ್ದು ಇದೀಗ ಸಿಯಾಟಲ್ನಲ್ಲಿ ಮತ್ತೊಂದು ಕಚೇರಿ ಆರಂಭಿಸಲಿದೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮತ್ತು ಅಹ್ಮದಾಬಾದ್ನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ.
► ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಸುಲಭವಾಗುವಂತೆ ಹೊಸ ವೀಸಾ ನಿಯಮ ರೂಪಿಸಲಾಗಿದೆ. ಇದರಂತೆ, ಎಚ್-1ಬಿ ವೀಸಾದಡಿ ಇರುವ ಕಡಿಮೆ ಸಂಖ್ಯೆಯ ಭಾರತೀಯರು ಹಾಗೂ ಇತರ ವಿದೇಶಿ ಕೆಲಸಗಾರರು ಅಮೆರಿಕದಲ್ಲಿ ಇದ್ದುಕೊಂಡೇ ತಮ್ಮ ವೀಸಾಗಳನ್ನು ನವೀಕರಿಸಬಹುದಾಗಿದೆ. ಮುಂದಿನ ದಿನದಲ್ಲಿ ಈ ಯೋಜನೆಯನ್ನು ಇನ್ನಷ್ಟು ಭಾರತೀಯರಿಗೆ ವಿಸ್ತರಿಸಲಾಗುವುದು. 2022ರಲ್ಲಿ ಎಚ್-1ಬಿ ವೀಸಾ ಹೊಂದಿರುವ 4,42,000 ಜನರಲ್ಲಿ 73%ದಷ್ಟು ಭಾರತೀಯರಾಗಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
► 2025ರೊಳಗೆ ಚಂದಿರನೆಡೆಗೆ ಮಾನವರನ್ನು ಕಳುಹಿಸುವ, ಅಮೆರಿಕ ನೇತೃತ್ವದ ‘ಆರ್ಟೆಮಿಸ್ ಒಪ್ಪಂದ’ಕ್ಕೆ ಭಾರತ ಸೇರ್ಪಡೆಯಾಗಲಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.
► ಅಮೆರಿಕದ ಪ್ರಮುಖ ಸಂಸ್ಥೆ ‘ಮೈಕ್ರಾನ್ ಟೆಕ್ನಾಲಜಿ’(ಕಂಪ್ಯೂಟರ್ ಚಿಪ್ ಉತ್ಪಾದಿಸುವ ಸಂಸ್ಥೆ) ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಿದೆ. ಸೆಮಿಕಂಡಕ್ಟರ್ಗಳು ಇಲೆಕ್ಟ್ರಾನಿಕ್ಸ್ ವಸ್ತುಗಳಿಂದ ಹಿಡಿದು ಅಟೊಮೊಬೈಲ್ ಕ್ಷೇತ್ರದವರೆಗೂ ಅತ್ಯಂತ ಪ್ರಮುಖ ಅಗತ್ಯವಾಗಿರುವುದರಿಂದ ಇದು ಅತ್ಯಂತ ಮಹತ್ವದ ಉಪಕ್ರಮವಾಗಿದೆ