ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿ :ಯುಎಇ ವಿರುದ್ಧ ಒಮಾನ್‌ಗೆ ಜಯ
ಐರ್‌ಲ್ಯಾಂಡ್‌ಗೆ ಮತ್ತೊಂದು ಸೋಲಿನ ಆಘಾತ
ಬುಲಾವಯೊ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಯುಎಇ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಒಮಾನ್ ತಂಡ ಮುಂದಿನ ಸುತ್ತಿಗೇರುವ ಸ್ಪರ್ಧೆಯಲ್ಲಿದೆ. ಸ್ಕಾಟ್‌ಲ್ಯಾಂಡ್ ವಿರುದ್ಧ 1 ವಿಕೆಟ್ ಅಂತರದಿಂದ ಸೋಲುಂಡಿರುವ ಐರ್‌ಲ್ಯಾಂಡ್ ಟೂರ್ನಿಯಿಂದ ನಿರ್ಗಮಿಸುವ ಹಾದಿಯಲ್ಲಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೈಕಲ್ ಲೀಸ್ಕ್ ಅರ್ಧಶತಕದ(ಔಟಾಗದೆ 91 ರನ್)ನೆರವಿನಿಂದ ಸ್ಕಾಟ್‌ಲ್ಯಾಂಡ್ ತಂಡ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಬಾಕಿ ಇರುವಾಗ 287 ರನ್ ಗುರಿಯನ್ನು ಯಶಸ್ವಿಯಾಗಿ ತಲುಪಿತು. ಸ್ಕಾಟ್‌ಲ್ಯಾಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 289 ರನ್ ಗಳಿಸಿತು. ಕೊನೆಯ ಎಸೆತದಲ್ಲಿ 2 ರನ್ ಗಳಿಸಿದ ಲೀಸ್ಕ್, ಸ್ಕಾಟ್‌ಲ್ಯಾಂಡ್ ತಂಡ ಐರ್‌ಲ್ಯಾಂಡ್‌ಗೆ 1 ವಿಕೆಟ್‌ನಿಂದ ಸೋಲುಣಿಸಲು ನೆರವಾದರು.
ಐರ್‌ಲ್ಯಾಂಡ್ ತಂಡ ಕರ್ಟಿಸ್ ಕ್ಯಾಂಫರ್(120 ರನ್)ಶತಕ, ಜಾರ್ಜ್ ಕಾಕ್ರೆಲ್ ಅರ್ಧಶತಕದ (69 ರನ್) ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 286 ರನ್ ಗಳಿಸಿತು. ಸ್ಕಾಟ್‌ಲ್ಯಾಂಡ್ ಪರ ಬ್ರೆಂಡನ್ ಮೆಕ್‌ಮುಲ್ಲನ್ (5-34)ಐದು ವಿಕೆಟ್ ಗೊಂಚಲು ಪಡೆದರು.
ಇತ್ತೀಚೆಗೆ ಐರ್‌ಲ್ಯಾಂಡ್ ವಿರುದ್ಧ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ಒಮಾನ್ ತಂಡ ಯುಎಇ ವಿರುದ್ಧ 5 ವಿಕೆಟ್ ಅಂತರದಿಂದ ಜಯ ಸಾಧಿಸಿದೆ.
ಮೊದಲು ಫೀಲ್ಡಿಂಗ್ ಆಯ್ದುಕೊಂಡ ಒಮಾನ್ ತಂಡ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಯುಎಇ ತಂಡವನ್ನು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್‌ಗೆ ನಿಯಂತ್ರಿಸಿತು. ಯುಎಇ ಪರ ಅಯಾನ್ ಅಫ್ಝಲ್‌ಖಾನ್ ಔಟಾಗದೆ 58 ರನ್ ಗಳಿಸಿದರು. ಅರವಿಂದ್ 49 ರನ್ ಕೊಡುಗೆ ನೀಡಿದರು. ಸತತ ಎರಡನೇ ಅರ್ಧಶತಕ ಸಿಡಿಸಿದ ಅತಿಕ್ ಇಲ್ಯಾಸ್(53 ರನ್) ಸಹಿತ ಮೂವರು ಬ್ಯಾಟರ್‌ಗಳ ಸಾಹಸದಿಂದ ಒಮಾನ್ 4 ಓವರ್ ಬಾಕಿ ಇರುವಾಗಲೇ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ಗೆಲುವಿನ ದಡ ಸೇರಿತು.-
ಶುಐಬ್ ಖಾನ್(ಔಟಾಗದೆ 52 ರನ್) ಹಾಗೂ ಮುಹಮ್ಮದ್ ನದೀಮ್(ಔಟಾಗದೆ 50 ರನ್) ಅರ್ಧಶತಕದ ಕೊಡುಗೆ ನೀಡಿ ಗೆಲುವಿಗೆ ಸಹಾಯ ಮಾಡಿದರು. ಒಮಾನ್ ಪರ ಆಫ್ ಸ್ಪಿನ್ನರ್ ಜಯ್ ಒಡೆದ್ರಾ(3-31) ಬೌಲಿಂಗ್‌ನಲ್ಲಿ ಮಿಂಚಿದರು. ಸತತ ಎಸೆತದಲ್ಲಿ ರಮೀಝ್ ಶಹಝಾದ್(38) ಹಾಗೂ ಅರವಿಂದ್(49 ರನ್)ವಿಕೆಟ್‌ಗಳನ್ನು ಪಡೆದ ಜಯ್ 3ನೇ ವಿಕೆಟ್‌ಗೆ 87 ರನ್ ಜೊತೆಯಾಟಕ್ಕೆ ತೆರೆ ಎಳೆದರು. ಜಯ್‌ಗೆ ಬಿಲಾಲ್ ಖಾನ್(2-46) ಸಾಥ್ ನೀಡಿದರು.







