ಮಗನ ಹತ್ಯೆಗೈದ ಆರೋಪಿಯನ್ನು ಕೊಲೆಗೈದ ತಾಯಿ!

ಹೈದರಾಬಾದ್, ಜೂ. 22: ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬರು ಒಂದೂವರೆ ವರ್ಷದ ಹಿಂದೆ ತನ್ನ ಮಗನನ್ನು ಕೊಂದ ವ್ಯಕ್ತಿಯೊಬ್ಬನನ್ನು ಕೊಂದು ಪ್ರತೀಕಾರ ತೀರಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಬೆಳಗ್ಗೆ ಅವರು ಪೊಲೀಸರಿಗೆ ಶರಣಾಗಿದ್ದಾರೆ.
ಜಾನ್ ಬಿ ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆಯಲ್ಲಿ ತನ್ನ ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದರು. ಅವರು ತನ್ನ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಗಂಡ ಶಬೀರ್ 15 ವರ್ಷಗಳ ಹಿಂದೆ ನಿಧನರಾಗಿದ್ದರು.
ಜಾನ್ ಬಿ, ಶೇಖ್ ಬಾಜಿ ಎಂಬ ಸ್ಥಳೀಯ ರೌಡಿಯೊಂದಿಗೆ ಸಂಬಂಧ ಬೆಳೆಸಿದ್ದರು. ಇದು ದೊಡ್ಡ ಮಗನ ಗಮನಕ್ಕೆ ಬಂದಾಗ ಅವನು ಶೇಖ್ ಬಾಜಿಗೆ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದನು. ಕೋಪಗೊಂಡ ಶೇಖ್ ಬಾಜಿ ತನ್ನ ಗೆಳೆಯರ ನೆರವಿನಿಂದ 2021 ಆಗಸ್ಟ್‌ನಲ್ಲಿ ಜಾನ್ ಬಿಯ ದೊಡ್ಡ ಮಗನನ್ನು ಕೊಂದನು.
2021 ಡಿಸೆಂಬರ್‌ನಲ್ಲಿ, ಜಾನ್ ಬಿ ತನ್ನ ಸಹೋದರ ಮತ್ತು ಚಿಕ್ಕ ಮಗನೊಂದಿಗೆ ಪ್ರಧಾನ ಆರೋಪಿ ಕಸಮ್‌ನನ್ನು ಕೊಂದರು. ಬಳಿಕ ಪೊಲೀಸರಿಗೆ ಶರಣಾದರು.
ಕೆಲವು ತಿಂಗಳ ಬಳಿಕ ಜಾಮೀನಿನಲ್ಲಿ ಹೊರಬಂದ ಅವರು ಎರಡನೇ ಆರೋಪಿ ಶೇಖ್ ಬಾಜಿಯನ್ನು ಕೊಲ್ಲಲು ಯೋಜನೆ ರೂಪಿಸಿದರು. ಶೇಖ್ ಬಾಜಿಗೆ ಫೋನ್ ಮಾಡಿ ತಮ್ಮ ಸಂಬಂಧವನ್ನು ಮುಂದುವರಿಸುವ ಎಂದು ಮನವರಿಕೆ ಮಾಡಿದರು.
ಇದನ್ನು ನಂಬಿದ ಶೇಖ್ ಮಂಗಳವಾರ ರಾತ್ರಿ ಜಾನ್ ಬಿ ಸಹೋದರನ ಹುಟ್ಟುಹಬ್ಬಕ್ಕೆ ಬಂದನು. ಕುಡಿದ ಅಮಲಿನಲ್ಲಿದ್ದ ಆತನನ್ನು ಜಾನ್ ಬಿ ಮತ್ತು ಇತರ ಮೂವರು ಇರಿದು ಕೊಂದರು. ಬಳಿಕ ಅವರು ಪೊಲೀಸರಿಗೆ ಶರಣಾಗಿದ್ದಾರೆ.







